COSTALNEWS BIG BREAKING ಮೊದಲ ಮಳೆಯಲ್ಲೇ ರಸ್ತೆಯ ಮೇಲೆ ಕೆರೆ ನಿರ್ಮಾಣ! ಗುಜ್ಜಾಡಿ ನಾಯಕವಾಡಿ ಸರ್ಕಲ್‌ನಲ್ಲಿ ನೀರು ನಿಂತು ವಾಹನ ಸವಾರರ ಪರದಾಟ!
Monday, June 8, 2026
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯಕವಾಡಿ ಸರ್ಕಲ್ ಬಳಿ ಮೊದಲ ಮಳೆಯಲ್ಲೇ ರಸ್ತೆಯ ಮಧ್ಯಭಾಗದಲ್ಲಿ ನೀರು ನಿಂತು ಕೆರೆಯಂತಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತ್ರಾಸಿ – ಗಂಗೊಳ್ಳಿ – ಮುಳ್ಳಿಕಟ್ಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಮಳೆಯ ನೀರು ರಸ್ತೆಯ ಮೇಲೆ ನಿಂತು ಹೊಳೆಯಂತಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸ್ಥಳೀಯರ ಆರೋಪದಂತೆ, ರಸ್ತೆ ನಿರ್ಮಾಣದ ವೇಳೆ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸದೇ ಇರುವುದೇ ನೀರು ರಸ್ತೆಯ ಮೇಲೆ ನಿಲ್ಲಲು ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದು, ಅಪಘಾತ ಸಂಭವಿಸುವ ಆತಂಕವೂ ಎದುರಾಗಿದೆ.
ಮೊದಲ ಮಳೆಯಲ್ಲೇ ರಸ್ತೆಯ ಈ ದುಸ್ಥಿತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ (ಪಿ.ಡಬ್ಲ್ಯೂ.ಡಿ) ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.