Kundapura: ಉಡುಪಿ ಪರ್ಯಾಯ ಪ್ರತಿಭೆಗಳ ಅನಾವರಣದ ಮಹೋತ್ಸವ : ಡಾ.ತಲ್ಲೂರು*
Monday, January 19, 2026
ಕುಂದಾಪುರ: ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಕೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ, ಇದು ಪ್ರತಿಭೆಗಳ ಸಂಗಮದ ಮಹೋತ್ಸವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಉಡುಪಿಯಲ್ಲಿ ಶಿರೂರು ಮಠದ ಪರ್ಯಾಯೋತ್ಸವದ ಸಂದರ್ಭದಲ್ಲಿ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ ವತಿಯಿಂದ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರ್ಯಾಯ ಮಹೋತ್ಸವದಂದು ಉಡುಪಿ ನಗರವಿಡೀ ಶೃಂಗಾರಗೊoಡು ಹತ್ತಿಪ್ಪತ್ತು ವೇದಿಕೆಗಳಲ್ಲಿ ವಿವಿಧ ರಸಮಂಜರಿ, ಸಂಗೀತ, ನೃತ್ಯ ಮೊದಲಾದ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳ ಅನಾವರಣವೇ ನಡೆಯುತ್ತದೆ. ಇಲ್ಲಿ ಅಬಾಲವೃದ್ಧರಾಗಿ ಕಾರ್ಯಕ್ರಮ ನೀಡಿ ಪರ್ಯಾಯ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮನೋರಂಜನೆ ನೀಡುವುದು ನಡೆಯುತ್ತದೆ. ಪ್ರಸ್ತುತ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಮೂಲಕ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಪರ್ಯಾಯ ಮಹೋತ್ಸವಕ್ಕೆ ಅಪೂರ್ವ ಮೆರಗನ್ನು ನೀಡಿದ ಸಂಸ್ಥೆಯ ಪ್ರತಿಯೊಬ್ಬ ಕಲಾವಿದರು ಅಭಿನಂದನಾರ್ಹರು ಎಂದು ಅವರು ತಿಳಿಸಿದರು.
ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ನ ರೀಜನಲ್ ಹೆಡ್ ರಮೇಶ್ ವೈದ್ಯ, ಸಂಸ್ಥೆಯ ಪ್ರಕಾಶ್ ಕಾಮತ್, ವೆಂಕಟೇಶ್ ಕಾಮತ್, ವಂದಿತಾ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರುಗಳಾದ ರಮೇಶ್ಚಂದ್ರ, ಮಾಲಿನಿ ಕೇಶವ ಪ್ರಸಾದ್, ರವೀಂದ್ರ ಪ್ರಭು, ರಮ್ಯ ಸುಧೀಂದ್ರ, ರೇಷ್ಮಾ ಮಂಜುನಾಥ್ ಇವರೊಂದಿಗೆ ಕೋಸ್ಟಲ್ ಸ್ಟಾರ್ ಸದಸ್ಯರು ಕರೋಕೆ ಗೀತೆಗಳ ಮೂಲಕ ಸಂಗೀತ ರಸದೌತಣ ಉಣ ಬಡಿಸಿದರು. ಜೊತೆಗೆ ಪ್ರೀತಿ ಡ್ಯಾನ್ಸ್ ಗ್ರೂಪ್, ನೇಹಾ ಮತ್ತು ತಂಡದಿoದ ನೃತ್ಯ, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಗುರುಕಿರಣ್ ಇವರಿಂದ ಮನರಂಜನೆ ನಡೆಯಿತು. ಉದ್ಯಾವರದ ಶ್ರೀಕಲಾ ನಾಟ್ಯಾಲಯದ ಶಾರ್ವರಿ ಭಟ್ ಇವರಿಂದ ನೃತ್ಯರೂಪಕ ನಡೆಯಿತು.