ರಾಜ್ಯದ ಖ್ಯಾತ ಹಿರಿಯ ರಂಗಭೂಮಿ ಕಲಾವಿದ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ನಿಧನ
Monday, September 29, 2025
ಹುಬ್ಬಳ್ಳಿ:
ರಾಜ್ಯದ ಖ್ಯಾತ ಹಿರಿಯ ರಂಗಭೂಮಿ ಕಲಾವಿದ, ನಟ, ನಿರ್ದೇಶಕ ಮತ್ತು ನಾಟಕಕಾರ ಯಶವಂತ್ ಸರದೇಶಪಾಂಡೆ (೬೦) ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹುಬ್ಳಿಯಲ್ಲಿ ನೆಲೆಸಿದ್ದ ಯಶವಂತ್ ಅವರಿಗೆ ಬೆಳಿಗ್ಗೆ ಸುಮಾರು ೧೦ ಗಂಟೆಗೆ ಹೃದಯಾಘಾತ ಸಂಭವಿಸಿತು. ಅವರನ್ನು ತಕ್ಷಣವೇ ಹುಬ್ಬಳ್ಳಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ವೈದ್ಯರ ಪರಿಶ್ರಮಪಟ್ಟ ಹೊರತಾಗಿಯೂ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
೧೯೬೫ರ ಜೂನ್ ೧೩ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಜನಿಸಿದ ಯಶವಂತ್ ಸರದೇಶಪಾಂಡೆ ಅವರು ಕನ್ನಡ ರಂಗಭೂಮಿಯಲ್ಲಿ ದೀರ್ಘಕಾಲ ನಟಿಸಿ-ನಿರ್ದೇಶಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ವಿಶೇಷವಾಗಿ ಹಾಸ್ಯ ನಾಟಕಗಳಲ್ಲಿ ಅವರ ಪಾತ್ರಗಳು ಮನೆಮಾತಾಗಿವೆ. ರಾಜ್ಯಾದ್ಯಂತ ನಡೆದಿರುವ ನಾಟಕಗಳಲ್ಲಿ ಅವರ ಸೃಜನಶೀಲತೆಯು ಅನೇಕ ಯುವ ಕಲಾವಿದರಿಗೆ ಪ್ರೇರಣೆಯಾಗಿತ್ತು. ಅವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಸಕ್ರಿಯ ಕಲಾವಿದೆಯಾಗಿದ್ದಾರೆ.