Udupi : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯ ಮೆರವಣಿಗೆ…!! ಲಕ್ಷಾಂತರ ಮಂದಿ ಭಕ್ತಾದಿಗಳು ಭಾಗಿ..!
Saturday, January 17, 2026
ಉಡುಪಿ: ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಭಾನುವಾರ ಮುಂಜಾನೆ ನಗರದ ಜೋಡುಕಟ್ಟೆಯಿಂದ ಮಠದ ವರೆಗೆ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ತಡರಾತ್ರಿ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಪೂರೈಸಿ ಜೋಡುಕಟ್ಟೆಗೆ ಬಂದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು.
ವಾದ್ಯ, ಕೊಂಬು ಮೊದಲಾದ ಮಂಗಳವಾದ್ಯಗಳ ನಿನಾದ ಮುಗಿಲು ಮಟ್ಟಿತ್ತು. ಸಿಡಿಮದ್ದುಗಳನ್ನೂ ಸಿಡಿಸಲಾಯಿತು.
ಜೋಡುಕಟ್ಟೆಯಲ್ಲಿ ಶ್ರೀಪಾದರು ದೇವರಿಗೆ ಪೂಜೆ ಸಲ್ಲಿಸಿ, ಅಲಂಕೃತ ಮೇನೆಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮೆರವಣಿಗೆ ಆರಂಭವಾಯಿತು.
ಇತರ ಮಠಗಳ ಯತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ತಟ್ಟಿರಾಯ, ಕೀಲು ಕುದುರೆ, ವಿವಿಧ ವೇಷಧಾರಿಗಳು, ಕುಣಿತ ಭಜನಾ ತಂಡ, ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಮೆರವಣಿಗೆ ರಥಬೀದಿ ತಲುಪಿದಾಗ ಶ್ರೀಪಾದರು ಮೇನೆಯಿಂದ ಇಳಿದು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡಿದರು, ಬಳಿಕ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕೃಷ್ಣಮಠ ಪ್ರವೇಶಿಸಿ ನವರತ್ನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದರು.