ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura: ಯಕ್ಷಗಾನ ರಂಗದ ಶ್ರೇಷ್ಠ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

Kundapura: ಯಕ್ಷಗಾನ ರಂಗದ ಶ್ರೇಷ್ಠ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ


ಕುಂದಾಪುರ: ಯಕ್ಷಗಾನ ರಂಗದ ಶ್ರೇಷ್ಠ ಸಾಧಕ, ಪ್ರಸಂಗಕರ್ತ, ಖ್ಯಾತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ ಬೆಳಗ್ಗೆ (ನ.26) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ನಾಟಕ ಕಲಾವಿದರಾಗಿ ರಘುರಾಮ ಶೆಟ್ಟಿ ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು.

ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ. ತಾಯಿ ಕಂದಾವರ ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು.

ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಜತೆ ನೂಜಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ತಮ್ಮ ಆರಂಭದ ಬದುಕಿನಲ್ಲಿ 'ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿದ್ದ ಕಂದಾವರ ರಘುರಾಮ ಶೆಟ್ಟಿಯವರು, 'ಮಾದರಿ ಶಿಕ್ಷಕ' ಪ್ರಶಸ್ತಿಗೆ ಭಾಜನರಾಗಿದ್ದರು.

ಸಾಹಿತ್ಯ, ಸಂಗೀತ, ಯಕ್ಷಗಾನ ರಂಗದಲ್ಲಿ ಕಂದಾವರ ರಘುರಾಮ ಶೆಟ್ಟಿಯವರು ವಿದ್ಯಾರ್ಥಿಯಾಗಿದ್ದಾಗಲೇ ಮಕ್ಕಳ ಯಕ್ಷಗಾನದಲ್ಲಿ ಭಾಗವತಿ ಮಾಡಿ ಬಾಲ ಭಾಗವತ ಎಂದು ಖ್ಯಾತರಾಗಿದ್ದರು. ದಿವಂಗತ ಎಂ. ಎಂ. ಹೆಗ್ಡೆಯವರ ಕೂಟದಲ್ಲಿ ಹವ್ಯಾಸಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು. ಅರ್ಥಧಾರಿಯಾಗಿಯೂ ಖ್ಯಾತನಾಮ ಅರ್ಥಧಾರಿಗಳ ಜತೆ 'ತಾಳಮದ್ದಲೆ'ಯಲ್ಲಿಯೂ ಖ್ಯಾತಿ ಪಡೆದಿದ್ದರು.

1978 ರಿಂದ ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿಯವರು 'ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದರು. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀ ದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿಯಂತಹ ಸೂಪ‌ರ್ ಹಿಟ್ ಪ್ರಸಂಗಗಳನ್ನು ಕೊಡುಗೆಯಾಗಿ ನೀಡಿದ್ದರು.

ಕಂದಾವರ ರಘುರಾಮ ಶೆಟ್ಟಿಯವರ ನಿಧನದಿಂದ ಯಕ್ಷಗಾನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article