ನವದೆಹಲಿ: ಕಾರು ಸ್ಪೋಟ ಪ್ರಕರಣ- ಕಾರ್ ಮಾಲೀಕ ಬಂಧನ,ಸಾವಿನ ಸಂಖ್ಯೆ 12ಕ್ಕೆ ಏರಿಕೆ
Tuesday, November 11, 2025
ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಕಾರು ಸ್ಫೋಟದ ಬಗ್ಗೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕಾರಿನ ಮಾಲೀಕನನ್ನು ಬಂಧಿಸಿದ್ದಾರೆ. ಸ್ಫೋಟಕ್ಕೂ ಕೆಲ ಗಂಟೆಗಳಿಗೆ ಮೊದಲು ಶಂಕಿತ ಕಾರಿನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವು ಮಹತ್ವದ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.ಇದೇ ವೇಳೆ ಮೃತರ ಸಂಖ್ಯೆ 12 ಕ್ಕೇರಿದೆ.
ಪುಲ್ವಾಮಾ ವೈದ್ಯನಿಂದ ಕಾರು ಡ್ರೈವ್ ಫರಿದಾಬಾದ್‌ನಲ್ಲಿ ಪತ್ತೆಯಾದ ಭಾರಿ ಸ್ಫೋಟಕ ಪ್ರಕರಣ ಮತ್ತು ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೂ ಲಿಂಕ್ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಫೋಟಗೊಂಡ ಕಾರನ್ನು ಪುಲ್ವಾಮಾ ನಿವಾಸಿ ವೈದ್ಯ ಉಮರ್ ಮೊಹಮ್ಮದ್ ಚಲಾಯಿಸುತ್ತಿದ್ದ. ಸ್ಫೋಟದಲ್ಲಿ ಅಮೋನಿಯಮ್ ನೈಟ್ರೇಟ್, ಡಿಟೊನೇಟರ್ಸ್ ಬಳಕೆಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಸ್ಫೋಟಕ್ಕೆ ಮುನ್ನ 3 ಗಂಟೆ ಪಾರ್ಕ್ ಮಾಡಿದ್ದ ಹುಂಡೈ i20 ಕಾರು: ಬಿಳಿ ಬಣ್ಣದ ಐ20 ಕಾರು ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶದ ಬಳಿ ಮಧ್ಯಾಹ್ನ 3:19ರ ಸುಮಾರಿಗೆ ನಿಂತಿತ್ತು. ಮೂರು ಗಂಟೆಗಳ ಕಾಲ ಅಲ್ಲೇ ಇದ್ದು, ಸಂಜೆ 6:48ರ ವೇಳೆಗೆ ಪಾರ್ಕಿಂಗ್ ಪ್ರದೇಶದಿಂದ ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಜನಸಂದಣಿ ವೇಳೆ ಕಾರು ಪಾರ್ಕಿಂಗ್ ಪ್ರದೇಶದಿಂದ ಹೊರಹೋಗುತ್ತಿರುವುದು ಕಂಡುಬಂದಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನವನ್ನು ಪಾರ್ಕಿಂಗ್ ಪ್ರದೇಶಕ್ಕೆ ಯಾರು ತಂದರು, ನಂತರ ಅದನ್ನು ಯಾರು ಓಡಿಸಿದರು ಎಂಬುದನ್ನು ನಿರ್ಧರಿಸಲು ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತಿದೆ. ತನಿಖಾಧಿಕಾರಿಗಳು ವಾಹನದ
ಪೂರ್ಣ ಮಾರ್ಗ, ಅದು ಎಲ್ಲಿಂದ ಬಂತು, ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಹೇಗೆ ತಲುಪಿತು ಮತ್ತು ನಂತರ ಅದು ಸ್ಮಾರಕದ ಮುಂಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಡೆಗೆ ಹೇಗೆ ಚಲಿಸಿತು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.