ಕೊಲ್ಲೂರಿನಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ತ್ಯಾಗರಾಜ್ ನಗರದ ಮಹಿಳೆಯ ಶವ ಪತ್ತೆ…!
Saturday, August 30, 2025
ಕೊಲ್ಲೂರು: ಕೊಲ್ಲೂರಿಗೆ ಆಗಮಿಸಿ ಏಕಾಏಕಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಿವಾಹಿತ ಮಹಿಳೆಯ ಮೃತದೇಹ ಮಾವಿನಕಾರು ನದಿಯ ಬಳಿ ಪತ್ತೆಯಾಗಿದೆ.
ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಅವರ ಪುತ್ರಿ ವಸುಧಾ ಚಕ್ರವರ್ತಿ (46) ಅವರು ಆ. 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.
ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಿದರೂ ಶುಕ್ರವಾರ ಸಂಜೆಯ ತನಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಆಕೆಯ ನಿಗೂಢ ಕಣ್ಮರೆ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು.
ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸಿತ್ತು. ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗಿತ್ತು.
ಇಂದು ಮತ್ತೆ ಹುಡುಕಾಟ ನಡೆಸಿದಾಗ ಮಾವಿನಕಾರು ನದಿಯ ಬಳಿ ಮೃತದೇಹ ಪತ್ತೆಯಾಗಿದೆ.
ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಈಶ್ವರ ಮಲ್ಪೆ ಹಾಗೂ ಸ್ಥಳೀಯ ಪ್ರದೀಪ್ ಭಟ್ ಮೊದಲಾದವರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.