ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ : ಕಾರ್ಗಿಲ್ ವಿಜಯ ದಿವಸದ ಸಂಭ್ರಮ
Sunday, July 27, 2025
ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ : ಕಾರ್ಗಿಲ್ ವಿಜಯ ದಿವಸದ ಸಂಭ್ರಮದ ಆಚರಣೆ. ಜುಲೈ 26 ರಂದು ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ದೀಪಿಕಾ ಆಚಾರ್ಯರವರು ಈ ದಿನದ ವಿಶೇಷತೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ಹೇಳಿದರು. ಜುಲೈ 26 ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನ. 1999 ರಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಐತಿಹಾಸಿಕ ವಿಜಯದ ಸಂಕೇತವಾಗಿ ಈ ದಿನವನ್ನು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತದ ಮೂರು ಶಸಸ್ತ್ರ ಪಡೆಗಳ ಯೋಧರು ತೋರಿದ ಅಪ್ರತಿಮ ಸಾಹಸ ಕೆಚ್ಚೆದೆ ದೇಶಕ್ಕಾಗಿ ನೀಡಿದ ಬಲಿದಾನ ಇವೆಲ್ಲವನ್ನೂ ದೇಶದಾದ್ಯಂತ ಅತ್ಯಂತ ಹೆಮ್ಮೆ ಮತ್ತು ಗೌರವದಿಂದ ಸ್ಮರಿಸಲಾಗುತ್ತದೆ. ಸೈನಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಶಿಸ್ತು ಸಂಯಮ ದೇಶಭಕ್ತಿ ಸದೃಢತೆಯ ಗುಣಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ನೀವು ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ಮಾರ್ಮಿಕವಾಗಿ ಬೋಧಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜೋಶಿ. ಪಿ. ಪಿ. ನಿವೃತ್ತ ಜೂನಿಯರ್ ಕಮಿಷನಡ್ ಆಫೀಸರ್ ಭಾರತೀಯ ಸೇನೆ ಇವರು ಭಾರತೀಯ ಸೇನೆಯ ಹೊಸ ಶಕೆಗೆ ಮುನ್ನುಡಿ ಬರೆದಿದ್ದ ಕಾರ್ಗಿಲ್ ಸಮರದ ಕುರಿತಾಗಿ ಸವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ನಮ್ಮ ದೇಶದ ಸೈನಿಕರು ವೈರಿ ರಾಷ್ಟ್ರದ ಯೋಧರ ಹೆಡೆಮುರಿ ಕಟ್ಟುವಲ್ಲಿ ತೋರಿದ ಧೈರ್ಯ ಸಾಹಸ ಅಪ್ರತಿಮವಾದದ್ದು. ಯುದ್ಧದಲ್ಲಿ ಭಾರತೀಯ ಯೋಧರು ಎತ್ತರದ ಪ್ರದೇಶಗಳಲ್ಲಿ ಮೈನಸ್ ಡಿಗ್ರಿ ತಾಪಮಾನದಲ್ಲಿ ಶತ್ರುಗಳ ಸವಾಲನ್ನು ಮೆಟ್ಟಿ ನಿಂತು ಹೋರಾಡಿ ವಿಜಯಗಳಿಸಿದರು. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ದೇಶ ಸೇವೆಯೇ ಈಶ ಸೇವೆ ಎಂದು ಕಾರ್ಯನಿರ್ವಹಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿ ಹೇಳಿದರು. ಶಿಕ್ಷಕರಾದ ಕವಿರಾಜ್ ರವರು ಭಾರತೀಯ ಸೇನೆಯನ್ನು ಸೇರಲು ಇಂದು ಇರುವ ವಿಪುಲ ಅವಕಾಶಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಜೋಶಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿ ಕುಮಾರಿ ಪ್ರಕೃತಿಯವರು ಸ್ವಾಗತಿಸಿ ಫಾತಿಮಾ ಇಸ್ರಾ ರವರು ಧನ್ಯವಾದಗಳನ್ನು ಸಮರ್ಪಿಸಿದರು. ಕುಮಾರಿ ಮಿನಲ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.