ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS ಗಂಗೊಳ್ಳಿ: ಕಷ್ಟದಲ್ಲಿದ್ದ ಮೀನುಗಾರನ ಕುಟುಂಬಕ್ಕೆ ಆಸರೆಯಾದ ಸಹಕಾರಿ ಸಂಘ – ಮೃತ ಜಗನ್ನಾಥ್ ಖಾರ್ವಿ ಪತ್ನಿಗೆ ₹50,000 ಧನಸಹಾಯ

COSTALNEWS ಗಂಗೊಳ್ಳಿ: ಕಷ್ಟದಲ್ಲಿದ್ದ ಮೀನುಗಾರನ ಕುಟುಂಬಕ್ಕೆ ಆಸರೆಯಾದ ಸಹಕಾರಿ ಸಂಘ – ಮೃತ ಜಗನ್ನಾಥ್ ಖಾರ್ವಿ ಪತ್ನಿಗೆ ₹50,000 ಧನಸಹಾಯ

ಗಂಗೊಳ್ಳಿ: ಸಮುದ್ರವನ್ನೇ ನಂಬಿ ಬದುಕುತ್ತಿದ್ದ ಕುಟುಂಬವೊಂದಕ್ಕೆ ವಿಧಿಯಾಟ ದೊಡ್ಡ ಆಘಾತ ತಂದೊಡ್ಡಿದೆ. ಮೀನುಗಾರಿಕೆಗೆ ತೆರಳಿದ್ದಾಗ ಅನಾರೋಗ್ಯಕ್ಕೀಡಾಗಿ ಅಕಾಲಿಕ ಮರಣ ಹೊಂದಿದ ಗಂಗೊಳ್ಳಿಯ ದಾಕುಹಿತ್ಲು ನಿವಾಸಿ ಜಗನ್ನಾಥ್ ಖಾರ್ವಿ ಅವರ ಬಡ ಕುಟುಂಬದ ನೆರವಿಗೆ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಧಾವಿಸಿದೆ. ಮೃತರ ಪತ್ನಿಗೆ ಸಂಘದ ವತಿಯಿಂದ ₹50,000 ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಕಡಲ ಅಲೆಗಳ ನಡುವೆ ಕಷ್ಟಪಟ್ಟು ದುಡಿದು ಕುಟುಂಬ ಸಾಕುತ್ತಿದ್ದ ಜಗನ್ನಾಥ್ ಖಾರ್ವಿ, ಶ್ರೀ ಗಣಮಣಿ ಪ್ರಸಾದ್ ಮಾಟುಬಲೆ ದೋಣಿಯಲ್ಲಿ ಮೀನುಗಾರಿಕೆ ಕಾಯಕ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಕಡಲಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು.
ಕುಟುಂಬದ ಯಜಮಾನನನ್ನೇ ಕಳೆದುಕೊಂಡು ದಿಕ್ಕುತೋಚದಂತಾಗಿದ್ದ ಬಡ ಕುಟುಂಬಕ್ಕೆ ಇದೀಗ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ನೈತಿಕ ಹಾಗೂ ಆರ್ಥಿಕ ಬಲ ತುಂಬಿದೆ. ಸಂಘದ ವತಿಯಿಂದ ಮೃತ ಜಗನ್ನಾಥ್ ಖಾರ್ವಿ ಅವರ ಮನೆಗೆ ಸಂಘದ ಅಧ್ಯಕ್ಷರು ಹಾಗೂ ಸದ್ಯಕ್ಷರು ತೆರಳಿ ಪತ್ನಿಗೆ ₹50,000 ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
 ಆಪತ್ಕಾಲದಲ್ಲಿ ಸಿಕ್ಕ ಈ ಆಸರೆ ಕುಟುಂಬದ ಕಣ್ಣೀರು ಒರೆಸುವ ಸಣ್ಣ ಪ್ರಯತ್ನವಾಗಿದೆ.
 ಕಷ್ಟಕಾಲದಲ್ಲಿ ಮೀನುಗಾರ ಕಾರ್ಮಿಕನ ಕುಟುಂಬಕ್ಕೆ ನೆರವಾದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article