Mangaluru ಹಾಡಹಗಲೇ ಬಂಟ್ವಾಳದ ಬಸ್ ನಿಲ್ದಾಣದಲ್ಲೇ ಯುವತಿಯ ಅಮಾನುಷ ಹತ್ಯೆ...!*
Thursday, July 16, 2026
ಬಂಟ್ವಾಳ : ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಎಲ್ಲರ ಕಣ್ಣೆದುರೇ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕ್ರೂರವಾಗಿ ಕೊಲೆ ಮಾಡಲಾಗಿದೆ.
ಮೃತ ಯುವತಿಯನ್ನು ಕಕ್ಕೆ ಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಇವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಉದ್ಯೋಗಿಯಾಗಿದ್ದರು.
ಲಾವಣ್ಯ ಅವರು ಕಕ್ಕೆಪದವು ಕಡೆಗೆ ತೆರಳಲು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವಕನ ಬಗ್ಗೆ ಆತಂಕಗೊಂಡು, ತಕ್ಷಣವೇ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, "ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ" ಎಂದು ಭಯದಿಂದಲೇ ತಿಳಿಸಿದ್ದರು.
ಆತಂಕಗೊಂಡ ಯುವತಿ ತಕ್ಷಣವೇ ಬಸ್‌ನಿಂದ ಕೆಳಗಿಳಿದಿದ್ದಾರೆ. ಆದರೆ, ಅವಳನ್ನೇ ಬೆನ್ನಟ್ಟಿಕೊಂಡು ಬಂದ ಆ ನರಾಧಮ, ತಾನು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಹರಿತವಾದ ಮಾರಕಾಸ್ತ್ರವನ್ನು ಹೊರಗೆಳೆದಿದ್ದಾನೆ. ಇದನ್ನು ಕಂಡು ದಿಕ್ಕೆಟ್ಟ ಯುವತಿ ಪ್ರಾಣಭಯದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಎಲ್ಲರ ಸಮ್ಮುಖದಲ್ಲೇ ಆಕೆಯ ಮೇಲೆ ಹಿಂಸಾತ್ಮಕವಾಗಿ ಮಾರಕ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಆರೋಪಿ ಕೃತ್ಯ ಎಸಗಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಆತನ ಹೆಸರು ಚೇತನ್ ಎಂದು ತಿಳಿದುಬಂದಿದೆ.
ಈತ ಯುವತಿಯನ್ನು ಏಕ ಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಈ ವೇಳೆಗೆ ಈ ದೃಶ್ಯವನ್ನು ಬಸ್ಸು ನಿಲ್ದಾಣದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.
ಸ್ಥಳದಲ್ಲಿ ಆತಂಕದ ವಾತಾವರಣ
ಬಸ್ ನಿಲ್ದಾಣದಲ್ಲೇ ಇಂತಹ ಭೀಕರ ದುಷ್ಕೃತ್ಯ ನಡೆದಿದ್ದರಿಂದ ಕೆಲಕಾಲ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಹಾಡಹಗಲಲ್ಲೇ ಸಾರ್ವಜನಿಕರ ಎದುರೇ ಯುವತಿಯೊಬ್ಬಳನ್ನು ಇಷ್ಟು ಕ್ರೂರವಾಗಿ ಹತ್ಯೆ ಮಾಡಿರುವುದು ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ನಾಗರಿಕ ವಲಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ಮೃತ ಯುವತಿ ಬಂಟ್ವಾಳ ಉಳಿಗ್ರಾಮ ನಿವಾಸಿ ಲಾವಣ್ಯ (21) ಹಾಗೂ ಆರೋಪಿತ ಬೆಳ್ತಂಗಡಿ ಒಡಿಲ್ನಾಳ ನಿವಾಸಿ ಚೇತನ್