Kundapura ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್ ಆಗಮನ: ಶ್ರೀ ಮೂಕಾಂಬಿಕಾ ತಾಯಿಗೆ ಪೂಜೆ ಸಲ್ಲಿಸಿ ನಿರ್ಗಮನ ..!
Friday, June 12, 2026
ಕೊಲ್ಲೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಲ್ಲೂರಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಳೆಯ ನಡುವೆಯೂ ದೇವಸ್ಥಾನಕ್ಕೆ ಆಗಮಿಸಿದ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಕಲಶ ದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ದೇವಾಲಯ ಪ್ರವೇಶಕ್ಕೂ ಮುನ್ನ ವಿಜಯ್ ಅವರು ಧ್ವಜಸ್ತಂಭಕ್ಕೆ ನಮಸ್ಕರಿಸಿ ಭಕ್ತಿಭಾವದಿಂದ ಒಳಪ್ರವೇಶಿಸಿದರು. ಬಳಿಕ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿಶೇಷ ಪೂಜೆಯ ಸಂಕಲ್ಪ ನೆರವೇರಿಸಲಾಯಿತು.
ಸುಮಾರು ಇಪ್ಪತ್ತು ನಿಮಿಷಗಳ ಕಾಲ ದೇವಾಲಯದಲ್ಲಿ ತಂಗಿದ್ದ ಅವರು, ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ವಿಜಯದ ಸಂಕೇತವಾಗಿ ಬೆಳ್ಳಿಯ ಖಡ್ಗವನ್ನು ಸಮರ್ಪಿಸಿದರು.
ಅರ್ಚಕರು ದೇವಿಯ ಸನ್ನಿಧಿಯಲ್ಲಿ ಸ್ತೋತ್ರ ಪಠಿಸಿ ವಿಜಯ್ ಅವರ ಕೈಗೆ ರಕ್ಷಾ ದಾರ ಕಟ್ಟಿದರು.
ಸಂಕಲ್ಪ ಪೂಜೆ ಬಳಿಕ ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದ ತಮಿಳುನಾಡು ಸಿಎಂ ವಿಜಯ್ ಅವರು ದೇವಸ್ಥಾನದಿಂದ ನಿರ್ಗಮಿಸಿದರು.
ಈ ಸಂದರ್ಭ ವಿಜಯ್ ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಹಾಜರಿದ್ದರು
ವಿಜಯ್ ಆಗಮನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹಾಗೂ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರಿನಿಂದ ಕೊಲ್ಲೂರು ತನಕ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದು ಜೆಡ್ ಪ್ಲಸ್ ಪೊಲೀಸರು ವಿಜಯ್ ಅವರ ಸುತ್ತಮುತ್ತ ಭದ್ರತೆಯಲ್ಲಿದ್ದರೂ.