udupi: ಅಸಹಾಯಕ ಹಿಂದೂ ವಿಧವೆಯ ಪರವಾಗಿ ಸಚಿವರ ಬಳಿ ಕಣ್ಣೀರಿಟ್ಟು ನೆರವು ಯಾಚಿಸಿದ ಮುಸ್ಲಿಂ ಮಹಿಳೆಯರು
Sunday, May 17, 2026
ಉಡುಪಿ: ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಇಂದಿನ ದಿನಗಳ ಮಧ್ಯೆ, ಉಡುಪಿಯಲ್ಲಿ ಮಾನವೀಯತೆ ಮತ್ತು ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಸಾರುವ ಅತ್ಯಂತ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ.
ಕಳೆದ 35 ವರ್ಷಗಳಿಂದ ಹಕ್ಕುಪತ್ರವಿದ್ದರೂ ಮನೆ ಕಟ್ಟಲಾಗದೆ ದಿಕ್ಕೆಟ್ಟಿದ್ದ ಬಡ ಹಿಂದೂ ವಿಧವಾ ಮಹಿಳೆಯ ಪರವಾಗಿ, ನೆರೆಮನೆಯ ಮುಸ್ಲಿಂ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಕಣ್ಣೀರಿಟ್ಟು ನ್ಯಾಯಕ್ಕಾಗಿ ದನಿ ಎತ್ತಿದ್ದಾರೆ.
35 ವರ್ಷಗಳ ಸುದೀರ್ಘ ಹೋರಾಟ ಮತ್ತು ಅರಣ್ಯ ಇಲಾಖೆಯ ಅಡ್ಡಿ:
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯೋವೃದ್ಧ ಮಹಿಳೆ ಪತಿಯನ್ನು ಕಳೆದುಕೊಂಡು ಪ್ರಸ್ತುತ ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ 1989 ರಲ್ಲೇ ಸರ್ಕಾರದಿಂದ ಭೂರಹಿತರಿಗೆ ವಿತರಿಸಲಾಗುವ ವಸತಿ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿ, ಹಕ್ಕುಪತ್ರವನ್ನೂ ನೀಡಲಾಗಿತ್ತು. ಆದರೆ, ಸದರಿ ಜಾಗವು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಹಿಳೆಯ ಸ್ವಾಧೀನಕ್ಕೆ ಬಿಟ್ಟುಕೊಡಲು ನಿರಾಕರಿಸಿ, ವಾಸ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಬಡತನ ಹಾಗೂ ಅಸಹಾಯಕತೆಯಿಂದಾಗಿ ಗಿರಿಜಾ ಶೆಟ್ಟಿಗಾರ್ ಅವರಿಗೆ ಕಾನೂನು ಹೋರಾಟ ನಡೆಸಲು ಸಾಧ್ಯವಾಗಿರಲಿಲ್ಲ.
ಇದರಿಂದಾಗಿ ಸ್ವಂತ ಜಾಗದ ಹಕ್ಕುಪತ್ರ ಕೈಯಲ್ಲಿದ್ದರೂ, ಅವರು ಕೂಲಿ ಕೆಲಸ ಮಾಡಿಕೊಂಡೇ ಬಾಡಿಗೆ ಮನೆಯಲ್ಲಿ ದಿನದೂಡುವಂತಾಗಿತ್ತು.
ನೆರವಿಗಾಗಮಿಸಿದ ಮುಸ್ಲಿಂ ಕುಟುಂಬ:
ಗಿರಿಜಾ ಅವರ ಈ ಕರುಣಾಜನಕ ಸ್ಥಿತಿಯನ್ನು ಕಂಡು ಸ್ಪಂದಿಸಿದ ನೆರೆಮನೆಯ ಸಲಹುದ್ದೀನ್ ಎಂಬುವವರ ಕುಟುಂಬ, ಅವರ ನೆರವಿಗೆ ಧಾವಿಸಿದೆ. ಕಾನೂನುಬದ್ಧವಾಗಿ ಭೂಮಿಯ ಸ್ವಾಧೀನ ಪಡೆಯಲು ಈ ಕುಟುಂಬ ಗಿರಿಜಾ ಅವರನ್ನು ಹಲವು ಸರ್ಕಾರಿ ಅಧಿಕಾರಿಗಳ ಕಚೇರಿಗೆ ಅಲೆದಾಡಿಸಿದೆ. ಸದ್ಯ ಜಾಗ ಸಿಕ್ಕರೆ ಮನೆ ಕಟ್ಟಿಕೊಡಲು ಹಲವು ದಾನಿಗಳು ಸಿದ್ಧರಿದ್ದಾರಾದರೂ, ಅರಣ್ಯ ಇಲಾಖೆಯ ತಾಂತ್ರಿಕ ಅಡಚಣೆಯಿಂದಾಗಿ ಜಾಗ ಸಿಗದೆ ವೃದ್ಧೆ ಪರದಾಡುತ್ತಿದ್ದಾರೆ.
ಸಚಿವರ ಮುಂದೆ ಕಣ್ಣೀರಿಟ್ಟ ಮಹಿಳೆಯರು:
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಸಲಹುದ್ದೀನ್ ಕುಟುಂಬದ ಇಬ್ಬರು ಮುಸ್ಲಿಂ ಮಹಿಳೆಯರು ಉಡುಪಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಂಗುದಾಣಕ್ಕೆ ತೆರಳಿ ಅಹವಾಲು ಸಲ್ಲಿಸಿದರು.
ನಮಗೇನೂ ಬೇಡ, ನಮ್ಮ ನೆರೆಮನೆಯ ಆ ಅಸಹಾಯಕ ವೃದ್ಧೆಗೆ ಸಹಾಯ ಮಾಡಿ, ಅವರಿಗೆ ಸ್ವಂತ ಸೂರು ಸಿಗುವಂತೆ ಮಾಡಿ ಎಂದು ಮುಸ್ಲಿಂ ಮಹಿಳೆಯರು ಸಚಿವರ ಮುಂದೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದು ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.
ಇದು ನಮ್ಮ ಅಸಲಿ ಭಾರತ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮುಸ್ಲಿಂ ಮಹಿಳೆಯರ ಈ ಕೋಮು ಸಾಮರಸ್ಯದ ಮತ್ತು ಮಾನವೀಯ ನಡವಳಿಕೆಯನ್ನು ಕಂಡು ಭಾವುಕರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೇ ನಮ್ಮ ನೈಜ ಭಾರತ. ಬಡ ಹಿಂದೂ ಮಹಿಳೆಯ ಕಷ್ಟಕ್ಕೆ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿರುವುದು ಇಲ್ಲಿನ ಸಾಮರಸ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಮನೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿ, ಮಹಿಳೆಗೆ ಭೂಮಿಯ ವಾಸ್ತವ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ (DC) ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಕ್ಕುಪತ್ರವಿದ್ದರೂ ಮೂರೂವರೆ ದಶಕಗಳಿಂದ ಸ್ವಂತ ಮನೆ ಕಾಣದ ವೃದ್ಧೆಗೆ ಈಗ ನೆರೆಹೊರೆಯವರ ಸೌಹಾರ್ದತೆಯಿಂದಾಗಿ ನ್ಯಾಯ ಸಿಗುವ ಭರವಸೆ ಮೂಡಿದೆ.