Kundapura 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿ ಇಟ್ಟುಕೊಂಡು ದೌರ್ಜನ್ಯ ನಡೆಸಿದ ಆರೋಪ : ಆರೋಪಿ ಬಂಧನ…!!
Wednesday, March 11, 2026
ಕುಂದಾಪುರ : ತಾಲೂಕಿನ ಕನ್ಯಾನ ಗ್ರಾಮದ ಕಬ್ಬೈಲು ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ (ಕೊರಗ) ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿರುವ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ನಾಗ (65) ಎಂಬವರು ಪರಿಶಿಷ್ಟ ಪಂಗಡ (ಕೊರಗ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರನ್ನು ಸುಮಾರು 30 ವರ್ಷಗಳ ಹಿಂದೆ ಕುಂದಾಪುರದ ಹೆಮ್ಮಾಡಿ ಸಮೀಪದ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಅವರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು.
ಸುಬ್ಬಣ್ಣ ಶೆಟ್ಟಿ ಅವರು ಮೃತಪಟ್ಟ ಬಳಿಕ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ಅವರು ನಾಗ ಅವರನ್ನು ಮನೆಯ ದನ ಕಾಯುವುದು, ತೋಟದ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ನಾಗ ಎಂಬುವವರಿಂದ ದನ–ಎಮ್ಮೆ ನೋಡಿಕೊಳ್ಳುವುದು, ಸಗಣಿ ತೆಗೆದು ಗದ್ದೆ ಕೆಲಸ ಮಾಡುವುದು ಹಾಗೂ ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುವ ಕೆಲಸ ಮಾಡಿಸ ಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರನ್ನು ಸುಮಾರು 30 ವರ್ಷಗಳಿಂದ ಬಲವಂತವಾಗಿ ಜೀತದಾಳಾಗಿ ಕೆಲಸ ಮಾಡಿಸಿಕೊಂಡು ಸರಿಯಾದ ಕೂಲಿ ನೀಡದೆ, ಮೂಲಭೂತ ಸೌಕರ್ಯಗಳನ್ನೂ ಒದಗಿಸದೆ ದನದ ಕೊಟ್ಟಿಗೆಯಲ್ಲೇ ಮಲಗಲು ಒತ್ತಾಯಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ ಸಂಬಳ ನೀಡದೆ ಮನೆಯಿಂದ ಹೊರಗೆ ಹೋಗಲು ಬಿಡದೆ ದೌರ್ಜನ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2026ರಂತೆ SC/ST ಕಾಯ್ದೆ 2015ರ ಕಲಂ 3(1)(H) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರು ಆರೋಪಿ ರಜನಿ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಕುಂದಾಪುರದ ಸಹಾಯಕ ನಿರ್ದೇಶಕರು, ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ಉಪ ತಹಶೀಲ್ದಾರರು, ಗ್ರಾಮ ಆಡಳಿತ ಅಧಿಕಾರಿ ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೊಂದ ವ್ಯಕ್ತಿ ನಾಗ ಅವರನ್ನು ವಿಚಾರಿಸಿ ಅವರಿಗೆ ಮುಂದಿನ ಪುನರ್ವಸತಿ ಕಲ್ಪಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಇಂತಹ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆರೋಪಿಗಳ ವಿರುದ್ಧ ಸಾಕಷ್ಟು ಚರ್ಚೆಯಾಗುತ್ತಿದೆ ಹಾಗೂ ಆಕ್ರೋಶವು ಕಾರಣವಾಗುತ್ತಿದೆ
ಹಾಗೂ ಇಂತಹ ಆರೋಪದಿಂದ ಉಡುಪಿ ಜಿಲ್ಲೆಯ ಜನತೆ ತಲೆತಗ್ಗಿಸುವಂತೆ ಮಾಡಿದೆ,
ಈ ಪ್ರಕರಣ ಜಿಲ್ಲಾ ಆಡಳಿತ ಸೂಕ್ಷ್ಮ ರೀತಿಯಲ್ಲಿ ಕಾನೂನು ತನಿಖೆ ಮುಂದುವರೆದಿದೆ ಎನ್ನಲಾಗುತ್ತಿದೆ
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ