Kundapura ಅಮಾಸೆಬೈಲು : ಹಾಡುಹಗಲೇ ಮನೆಗೆ ನುಗ್ಗಿ 10 ಲಕ್ಷ ರೂಪಾಯಿ ಲೂಟಿದ ಕಳ್ಳರು
Monday, March 9, 2026
ಅಮಾಸೆಬೈಲು: ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಇದೀಗ ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬರೋಬ್ಬರಿ 10 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ರವಿವಾರ ನಡೆದಿದೆ.
ಅಮಾಸೆಬೈಲು ಸಮೀಪದ ಕೊಟ್ಟಕ್ಕಿ ನಿವಾಸಿ, ಆನಂದ ಪೂಜಾರಿಯವರು ಅಮಾಸೆಬೈಲು ಮಾರುಕಟ್ಟೆಯಲ್ಲಿ ದಿನಸಿ ಅಂಗಡಿ ಮತ್ತು ಕೋಳಿ ಫಾರಂ ನಡೆಸುತ್ತಿದ್ದು, ಅಡಿಕೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನುಗ್ಗಿದ ಕಳ್ಳರು ಕಪಾಟಿನ ಬಾಗಿಲು ಮುರಿದು ಒಳಗಿದ್ದ ಹಣವನ್ನು ದೋಚಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಕಳುವಾದ 10 ಲಕ್ಷ ರೂಪಾಯಿ ಮೊತ್ತವು ಆನಂದ ಪೂಜಾರಿಯವರು ಇತ್ತೀಚೆಗಷ್ಟೇ ಅಡಿಕೆ ಮಾರಾಟ ಮಾಡಿ ತಂದಿದ್ದ ಹಣ ಎನ್ನಲಾಗಿದೆ. ಕಳ್ಳರಿಗೆ ಈ ಹಣದ ಬಗ್ಗೆ ಮೊದಲೇ ಮಾಹಿತಿ ಇತ್ತೇ ಎಂಬ ಸಂಶಯವೂ ವ್ಯಕ್ತವಾಗಿದೆ. ಹಾಗೂ ಸ್ಥಳೀಯರ ಕೈವಾಡವಿದೆ ಎಂದು ಮೇಲ್ನೋಟಕ್ಕೆ ಅಮಾಸೆ ಬೈಲು ಭಾಗದಲ್ಲಿ ಗುಟು ಗುಸು ಸುದ್ದಿಯಾಗುತ್ತಿದೆ
ಕಳ್ಳರು ಅತ್ಯಂತ ಚಾಲಾಕಿತನದಿಂದ ವರ್ತಿಸಿದ್ದು, ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಸಿಸಿಟಿವಿ ಡಿವಿಆರ್ (DVR) ಅನ್ನು ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಲಾಗಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ದರೋಡೆ ಪ್ರಕರಣವೊಂದು ವರದಿಯಾಗಿತ್ತು, ಇದೀಗ ಮತ್ತೊಂದು ದೊಡ್ಡ ಕಳ್ಳತನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಆರೋಪಿಗಳ ಹೆಡೆಮುರಿ ಕಟ್ಟಲು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ
ವರದಿ: ನಾಗರಾಜ್ ಪೂಜಾರಿ ಅಮಾವಾಸ್ಯೆ ಬೈಲು