puttur ರಾಮಚಂದ್ರಾಪುರ ಮಠ ಪ್ರಕರಣ:ಪೋರಿ ಹಿಂದೆ ಹೋರಿ ಲೇಖನ: ಪತ್ರಕರ್ತ ಆರೋಪ ಮುಕ್ತ
Saturday, February 7, 2026
ಪುತ್ತೂರು : ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಪ್ರಮುಖ ಅಂಕಣಕಾರ ಹಾಗೂ ವಿಚಾರವಾದಿ ಬಿಳಿದಾಳೆ ಈಶ ಅವರು ಸಂಪೂರ್ಣ ದೋಷಮುಕ್ತರಾಗಿದ್ದಾರೆ.
2009ರ ಮೇ 27ರಂದು 'ಗೌರಿ ಲಂಕೇಶ್ ಪತ್ರಿಕೆ'ಯಲ್ಲಿ 'ಪೋರಿ ಹಿಂದೆ ಹೋರಿ' ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ಲೇಖನದಲ್ಲಿ, ಹಿಂದಿ ಚಿತ್ರತಾರೆ ಮಲ್ಲಿಕಾ ಶರಾವತ್ ಅವರ ರಾಮಚಂದ್ರಾಪುರ ಮಠ ಭೇಟಿ ಸಂದರ್ಭಕ್ಕೆ ಸಂಬಂಧಿಸಿ ಸ್ವಾಮೀಜಿ ಹಾಗೂ ಮಠದ ಕುರಿತು ಭಕ್ತಿ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಅವಹೇಳನಕಾರಿ ಹೇಳಿಕೆಗಳಿದ್ದವು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಪುತ್ತೂರಿನ ನೂತನ ನ್ಯಾಯಾಲಯದಲ್ಲಿ ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ನ್ಯಾಯಾಧೀಶರು ಲೇಖನವು ಅಪರಾಧದ ಮಟ್ಟಕ್ಕೆ ತಲುಪಿಲ್ಲ ಎಂದು ತೀರ್ಮಾನಿಸಿ ಬಿಳಿದಾಳೆ ಈಶ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಇದು ಆ ನ್ಯಾಯಾಲಯದ ಮೊದಲ ತೀರ್ಪುಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.
ಈ ತೀರ್ಪು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಲವಾದ ಸಂದೇಶ ನೀಡುತ್ತದೆ ಎಂದು ಮಾಧ್ಯಮ ವಲಯದಲ್ಲಿ ಸ್ವಾಗತಿಸಲಾಗುತ್ತಿದೆ. ದೀರ್ಘಕಾಲದ ಕಾನೂನು ಹೋರಾಟದ ನಂತರ ಬಂದ ಈ ನ್ಯಾಯದ ತೀರ್ಪು ಬಿಳಿದಾಳೆ ಈಶ ಅವರ ಆತ್ಮೀಯ ಬಳಗದಲ್ಲೂ ಸಂತಸ ಮೂಡಿಸಿದೆ.