Kundapura ಕುಂದಾಪುರ; ದಕ್ಷಿಣ ಕನ್ನಡದಂತೆ ಉಡುಪಿಯಲ್ಲೂ ಕನ್ನಡ ಕಡ್ಡಾಯವಾಗಲಿ : ಜಿಲ್ಲಾಡಳಿತಕ್ಕೆ ಅ ರಾ ಪ್ರಭಾಕರ್ ಪೂಜಾರಿ ಆಗ್ರಹ
Tuesday, February 3, 2026
ನಗರದಲ್ಲಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, "ನೆರೆ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕನ್ನಡ ಅನುಷ್ಠಾನದ ಕುರಿತು ಅಲ್ಲಿನ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಸಾಂಸ್ಕೃತಿಕ ನಗರಿ, ಪರಶುರಾಮ ಸೃಷ್ಟಿಯ ಉಡುಪಿಯಲ್ಲಿ ಮಾತ್ರ ನಾಮಫಲಕಗಳಲ್ಲಿ ಕನ್ನಡ ಕಡೆಗಣಿಸಲ್ಪಡುತ್ತಿರುವುದು ವಿಷಾದನೀಯ. ಉಡುಪಿ ಜಿಲ್ಲಾಧಿಕಾರಿಗಳಿಗೂ ಇಂತಹ ಸದಾಚಾರದ ಮನಸ್ಸನ್ನು ದೇವರು ಬೇಗ ನೀಡಲಿ" ಎಂದು ಮಾರ್ಮಿಕವಾಗಿ ನುಡಿದರು.
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಪರಭಾಷೆಯ ಹಾವಳಿ ಹೆಚ್ಚುತ್ತಿದೆ. ನಾಮಫಲಕಗಳಲ್ಲಿ ಕನ್ನಡದ ಅಕ್ಷರಗಳು ಮಾಯವಾಗುತ್ತಿವೆ ಅಥವಾ ಅತೀ ಸಣ್ಣದಾಗಿ ಕಾಣಿಸುತ್ತಿವೆ. ರಾಜ್ಯ ಸರ್ಕಾರದ ನಿಯಮದಂತೆ ಶೇ. 60ರಷ್ಟು ಕನ್ನಡ ಬಳಕೆಯಾಗಬೇಕು ಎಂಬ ನಿಯಮವಿದ್ದರೂ, ಜಿಲ್ಲೆಯಲ್ಲಿ ಇದರ ಅನುಷ್ಠಾನ ಕುಂಠಿತವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
*ಕರೆ ಮತ್ತು ಎಚ್ಚರಿಕೆ:*
"ಕೇವಲ ಆದೇಶ ಹೊರಡಿಸಿದರೆ ಸಾಲದು, ಅದು ಕಾರ್ಯರೂಪಕ್ಕೆ ಬರಬೇಕು. ಉಡುಪಿ ಜಿಲ್ಲಾಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಜಿಲ್ಲೆಯಾದ್ಯಂತ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಮುಂದಿನ ದಿನಗಳಲ್ಲಿ ಕನ್ನಡ ಉಳಿವಿನ ದೃಷ್ಟಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ," ಎಂದು ರಾ ಪ್ರಭಾಕರ್ ಪೂಜಾರಿ ಅವರು ಜಿಲ್ಲಾಡಳಿತಕ್ಕೆ ತಕ್ಷಣವೇ ಇದರ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು