Bhatkal: ಪತ್ರಿಕೋದ್ಯಮ ಉದ್ಯಮ ಆಗದೆ ಮತ್ತು ಒತ್ತಡಕ್ಕೆ ಒಳಗಾಗದೇ ಪತ್ರಿಕಾ ಧರ್ಮ ಪಾಲನೆ ಅಗತ್ಯ – ಶ್ರೀ ಮಾರುತಿ ಗುರೂಜಿ ಎಚ್ಚರಿಕೆ!!(ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಜವಾಬ್ದಾರಿ ಅಪಾರ)
Friday, January 30, 2026
ಭಟ್ಕಳ: ಪತ್ರಕರ್ತರು ಯಾವುದೇ ಒತ್ತಡಕ್ಕೂ ಮಣಿಯದೆ ಸಮಾಜದ ಹಿತವನ್ನು ಮೊದಲಿಗಿಟ್ಟು ಪತ್ರಿಕಾ ಧರ್ಮ ಪಾಲಿಸಬೇಕು. ಸತ್ಯನಿಷ್ಠ ಲೇಖನಿಯಲ್ಲಿ ಚ್ಯುತಿ ಉಂಟಾದರೆ ಅದರ ಪರಿಣಾಮ ಸಮಾಜದ ಮೇಲೆ ಗಂಭೀರವಾಗಿ ಬೀರುವ ಸಾಧ್ಯತೆ ಇದೆ ಎಂದು ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರಿಕೆ ನೀಡಿದರು.
ನಗರದ ಶ್ರೀ ನಾಗಯಕ್ಷ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆಯ ಭಟ್ಕಳ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಅಸಮತೋಲನಗಳನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದು. ಈ ದಿಸೆಯಲ್ಲಿ ಎಲ್ಲ ಪತ್ರಕರ್ತರೂ ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ರಾಜ್ಯದ ಸ್ಥಿತಿಗತಿಗಳನ್ನು ನೈಜವಾಗಿ ಜನರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಹೊತ್ತಿದೆ ಎಂದು ಅವರು ಹೇಳಿದರು.
ಸುದ್ದಿ ಪ್ರಸಾರದಲ್ಲಿ ತುರ್ತುಪಡುವ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೂ ಕುಟುಂಬದ ಜವಾಬ್ದಾರಿಗಳಿವೆ ಎಂಬುದನ್ನು ಸರ್ಕಾರ ಮನಗಾಣಬೇಕು. ಪತ್ರಕರ್ತರು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಈ ದಿಸೆಯಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಮಾರುತಿ ಗುರೂಜಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ( ರಿ) ತಾಲೂಕು ಅಧ್ಯಕ್ಷ ಶಂಕರ್ ನಾಯಕ್ ವಹಿಸಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ ಗೋವಿಂದ ಪೂಜಾರಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವಲ್ಲಿ ಪತ್ರಕರ್ತರ ಪಾತ್ರ ಅನನ್ಯವಾಗಿದೆ. ಪತ್ರಕರ್ತರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಟ್ರಸ್ಟ್ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ಹಿರಿಯ ವರದಿಗಾರ ಗಂಗಾಧರ್ ಮೊದಲಿಯರ್ ಮಾತನಾಡಿ, ಪತ್ರಕರ್ತರನ್ನು ಭಯೋತ್ಪಾದಕರಂತೆ ಕಾಣುವ ಮನೋಭಾವ ಕೆಲವು ಕಡೆಗಳಲ್ಲಿ ಕಂಡುಬರುತ್ತಿರುವುದು ದುಃಖಕರ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಗಟ್ಟಿಯಾದ ನೆಲೆಯಲ್ಲಿ ನಿಂತು ತಮ್ಮ ಮಧ್ಯಮ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಪತ್ರಿಕೋದ್ಯಮದಲ್ಲಿ ವೇಗವಾಗಿ ಬದಲಾವಣೆಗಳು ನಡೆಯುತ್ತಿದ್ದು, ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ಮಾಧ್ಯಮ ಕ್ಷೇತ್ರವೂ ಹೊಂದಿಕೊಳ್ಳಬೇಕಿದೆ. ಇಂತಹ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭಗಳು ಹಾಗೂ ವಿಚಾರ ಸಂಕಿರಣಗಳು ಹೊಸ ಪತ್ರಕರ್ತರಿಗೆ ಪ್ರೇರಣೆಯಾಗುತ್ತವೆ ಎಂದರು.
ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಮೂರು ವರ್ಷಗಳಲ್ಲಿ ಸಂಘಟನೆ 26 ಜಿಲ್ಲೆಗಳಿಗೆ ವಿಸ್ತರಿಸಿದೆ. ಪತ್ರಕರ್ತರ ಮಾಸಾಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾನಿಪ ಧ್ವನಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ದೈವಜ್ಞ, ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ ನಾಯಕವಾಡಿ, ಅಂಕೋಲಾ ತಾಲೂಕು ಅಧ್ಯಕ್ಷ ಮಾರುತಿ, ಶಿರಸಿ ತಾಲೂಕು ಅಧ್ಯಕ್ಷ ರಾಜೇಶ್ ಮೊಗೇರ್, ಮುಂಡಗೋಡ್ ತಾಲೂಕು ಅಧ್ಯಕ್ಷ ಸಂತೋಷ್ ದೈವಜ್ಞ, ಭಟ್ಕಳ ತಾಲೂಕು ಪದಾಧಿಕಾರಿಗಳಾದ ಶಂಕರ ನಾಯ್ಕ, ಉಲ್ಲಾಸ್ ಶಾನ್ ಬಾಗ್, ನಸೀಬ್ ಮುಲ್ಲಾ ಘನಿ, ಜಾವಿದ್ ಸಿಂಗೇರಿ, ಡಿಎಫ್‌ಒ ಯೋಗೇಶ್, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.