ಬೈಂದೂರು; :ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ "ಪೋಷಕ, ಶಿಕ್ಷಕ ಮತ್ತು ಆಡಳಿತ ಮಂಡಳಿಯ ಸಭೆ"
Saturday, August 2, 2025
ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಮೊದಲ ಪೋಷಕ, ಶಿಕ್ಷಕ ಮತ್ತು ಆಡಳಿತ ಮಂಡಳಿಯ ಸಭೆಯು ದಿನಾಂಕ 02-08-2025 ರ ಶನಿವಾರದಂದು ಜರುಗಿತು.
ಈ ಸಭೆಗೆ ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಕಾರ್ಕಳ ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪೋಷಕರನ್ನುದ್ದೇಶಿಸಿ ಮಾತನಾಡಿದ ರಾಜೇಂದ್ರ ಭಟ್ " ಮಕ್ಕಳು ನಮ್ಮ ಮನೆಯನ್ನು ಬೆಳಗುವ ದೀಪವಾಗಿದ್ದಾರೆ. ಅವರಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸಿಕೊಡುವುದು ಪೋಷಕರ ಕರ್ತವ್ಯವಾಗಿದೆ. ಕಲಿಕೆ ಮನೆಯಿಂದಲೇ ಆರಂಭವಾಗುವುದರಿಂದ ಹೆತ್ತವರೇ ಮಕ್ಕಳಿಗೆ ಮೊದಲ ಆದರ್ಶವಾಗಬೇಕು. ಪೋಷಕರು ಮಕ್ಕಳ ಮೇಲೆ ಪ್ರೀತಿ, ನಂಬಿಕೆ, ವಿಶ್ವಾಸವಿಟ್ಟು ಬೆಳೆಸಿದಷ್ಟು ಮಕ್ಕಳ ಭವಿಷ್ಯ ಉನ್ನತಗೊಳುತ್ತದೆ. ಮಕ್ಕಳ ಮುಂದೆ ಯಾವತ್ತೂ ನಕಾರಾತ್ಮಕ ವಿಚಾರಗಳನ್ನು ಇಡಬಾರದು. ಅವರಲ್ಲಿ ಸಕಾರಾತ್ಮಕತೆಯನ್ನು ತುಂಬಿ ಅವರಲ್ಲಿನ ಶಕ್ತಿ, ಸಾಮರ್ಥ್ಯಗಳ ಕುರಿತಾಗಿ ಅವರಿಗೆ ಅರಿವು ಮೂಡಿಸಿ ಬದುಕಿನ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸಬೇಕು. ಕೇವಲ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು, ಅವರು ಸಾಧಿಸಿದ ಸಣ್ಣ ಸಣ್ಣ ಯಶಸ್ಸುಗಳನ್ನು ಸಂಭ್ರಮಿಸಬೇಕು " ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಮಾತನಾಡಿ " ಶಾಲೆಯಲ್ಲಿ ಅನುಷ್ಠಾನಕ್ಕೆ ತಂದಿರುವ ಎಲ್ಲಾ ನಿಯಮಗಳು ವಿದ್ಯಾರ್ಥಿಗಳ ಹಿತಕ್ಕಾಗಿ ಮತ್ತು ಅವರ ಸುರಕ್ಷಾತೆಗಾಗಿ. ಪೋಷಕರು ಶಾಲೆಯ ನಿಯಮಗಳಿಗೆ ಬದ್ಧರಾಗಿ, ಶಾಲೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿ, ಉತ್ತಮವಾದ ಶೈಕ್ಷಣಿಕ ಪರಿಸರದ ನಿರ್ಮಾಣಕ್ಕೆ ಶಾಲೆಯೊಂದಿಗೆ ಸಹಕರಿಸಬೇಕು" ಎಂದು ತಿಳಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ " ಜನತಾ ಸಂಸ್ಥೆಯನ್ನು ನಾವು ಈ ಗ್ರಾಮೀಣ ಭಾಗದಲ್ಲಿ ಹುಟ್ಟು ಹಾಕಿರುವುದು ಲಾಭ ಗಳಿಕೆಯ ಉದ್ದೇಶದಿಂದಲ್ಲ. ಈ ಭಾಗದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ದೊರಕಿಸಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಂಸ್ಥೆಯಲ್ಲಿನ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುವ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ, ಸಾಹಿತ್ಯ, ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುವುದು ನಮ್ಮ ಮಹದಾಸೆಯಾಗಿದೆ. ಈ ಗುರಿಯನ್ನು ತಲುಪಲು ಆಡಳಿತ ಮಂಡಳಿಯವರು, ಪೋಷಕರು, ಶಿಕ್ಷಕರಾದಿಯಾಗಿ ಎಲ್ಲರ ಪ್ರಯತ್ನವೂ ಅತ್ಯಂತ ಅಗತ್ಯವಾಗಿದೆ" ಎಂದರು.
ವಿದ್ಯಾರ್ಥಿಗಳಿಗೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅತ್ಯಂತ ಅನುಕೂಲವಾಗುವಂತೆ ಹೆಮ್ಮಾಡಿಯ ಉಪನ್ಯಾಸಕ ವೃಂದದವರು ಸಿದ್ಧಪಡಿಸಿದ ಸ್ಪರ್ಧಾತ್ಮಕ ಪರೀಕ್ಷಾ ಸ್ನೇಹಿ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಪೋಷಕರು, ಶಿಕ್ಷಕ- ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.