Aaಹಿಂದೂಗಳಿಗೆ ಮಾರಿಜಾತ್ರೆ, ಮುಸ್ಲಿಮರಿಗೆ ಕೇರಿ ಜಾತ್ರೆ: ಸೌಹಾರ್ದತೆಗೆ ಸಾಕ್ಷಿಯಾದ ಕಂಡ್ಲೂರು ಜಾತ್ರೆ
Thursday, August 14, 2025
ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಾರ್ಣಿಕ ಕ್ಷೇತ್ರ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮಾರಿ ಜಾತ್ರೆ ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ನಡೆಯುವ ಜಾತ್ರೆ ಇದಾಗಿದ್ದು ಮಾರಿಜಾತ್ರೆಯು ಬುಧವಾರ ಸಂಪನ್ನಗೊಂಡಿತು.
ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ವಿಜೃಂಭಣೆಯ ಪೂಜೆ ನಡೆದಿದ್ದು, ನಂತರ ಗರ್ಭಗುಡಿಯಲ್ಲಿ ಶ್ರೀಮಾರಿ ಅಮ್ಮನ ಪೂಜೆ ಮಾಡಿ ಬೆಳಗ್ಗಿನ ಜಾವ ಐದು ಗಂಟೆಗೆ ಕನ್ನಿಕಾಪರಮೇಶ್ವರೀ ದೇವಸ್ಥಾನದಿಂದ ಮಾರಿ ಗದ್ದುಗೆ, ಅಂದರೆ ಕಂಡ್ಲೂರಿನ ಮಸೀದಿಯ ಮುಂಭಾಗದಲ್ಲಿ ಕೆಲವೇ ಮೀಟರ್ ಅಂತರದಲ್ಲಿರುವ ಗದ್ದುಗೆಗೆ ತಂದು ಪ್ರತಿಷ್ಠಾಪಿಸುವುದು ಬಹಳ ವಿಶೇಷವಾಗಿದೆ. ಹಾಗೆ ಈ ಜಾತ್ರೆ ನೂರಾರು ವರ್ಷಗಳಿಂದ ಹೀಗೇನೇ ನಡೆಯುತ್ತ ಬರುತ್ತಿದೆ. ಎನ್ನುವುದೇ ವಿಶೇಷ!!
‘ಈ ಹಬ್ಬಕ್ಕೆ ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡುತ್ತಾರೆ. ಜೋಗಿ ಬಳೆಗಾರ ಸಮುದಾಯದದವರು ಅರ್ಚಕರಾಗಿರುತ್ತಾರೆ. ಉಳಿದಂತೆ ಎಲ್ಲಾ ಹಿಂದುಗಳು ಭಕ್ತಿಯಿಂದ ಈ ಮಾರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಹಲವು ಸಮಾಜದವರ ಸೇರುವಿಕೆಯಿಂದ ಬಹಳ ವಿಜೃಂಭಣೆಯಿಂದ ಮಾರಿಜಾತ್ರೆ ನಡೆಯುತ್ತದೆ’ ಎಂದು ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಧರ್ಮದರ್ಶಿ ಕೆ.ಎನ್.ಚಂದ್ರಶೇಖರ ಜೋಗಿ ತಿಳಿಸಿದ್ದಾರೆ.
ಆದಿ ಕಾಲದಿಂದಲೂ ಪ್ರಸಿದ್ಧವಾದ ಮಾರಿ ಜಾತ್ರೆ ಹಿಂದೂ-ಮುಸ್ಲೀಂ ಭಾವೈಕ್ಯದ ಸಂಕೇತವಾಗಿದೆ. ಜಾತ್ರೆಯ ವೇಳೆ ಸಂಪೂರ್ಣ ಕಂಡ್ಲೂರು ಜಾಮೀಯಾ ಮಸೀದಿ ರಸ್ತೆಯ ಮುಸ್ಲೀಂ ಕೇರಿ ಹಬ್ಬದ ರಂಗು ಪಡೆಯುತ್ತದೆ. ದೂರದೂರುಗಳು, ದೇಶ ವಿದೇಶದಿಂದ ಭಕ್ತಾದಿಗಳು ಜಾತ್ರೆ ಆಗಮಿಸುತ್ತಾರೆ. ಊರಿನ ಮುಸ್ಲಿಮರೂ ಕೂಡ ತಮ್ಮದೇ ಹಬ್ಬವೆಂಬಂತೆ ಸಂಭ್ರಮಿಸುತ್ತಾರೆ.
ಜಾತ್ರೆಯ ವ್ಯಾಪಾರ-ವಹಿವಾಟುಗಳಿಗೂ ಜೊತೆಯಾಗುತ್ತಾರೆ. ಪರಸ್ಪರ ಸಮನ್ವಯತೆ ಸಾಧಿಸಲು ಸಭೆ ಕರೆಯಲಾಗುತ್ತದೆ. ಹಬ್ಬಗಳ ನೈಜ್ಯ ಪರಿಕಲ್ಪನೆಯ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಲು ಇದು ಸಹಕಾರಿಯಾಗಿದೆ.
ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೇಶವ್ ಕುಲಕರಣಿ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಭೀಮಾಶಂಕರ್, ಹಾಗೂ ಪಿಎಸ್ಐ ಚಂದ್ರಕಲಾ ಹಾಗೂ ಸಿಬ್ಬಂದಿಗಳು ಮತ್ತು ಕುಂದಾಪುರ, ಗಂಗೊಳ್ಳಿ, ಶಂಕರ್ ನಾರಾಯಣ, ಕೋಟ, ಬೈಂದೂರು, ಕೊಲ್ಲೂರು, ಶಂಕರ್ ನಾರಾಯಣ, ಸೇರಿದಂತೆ ವಿವಿಧ ಠಾಣೆ ಪೊಲೀಸರು ಬಂದೋಬಸ್ತ್ ನಲ್ಲಿ ಹಾಜರಿದ್ದರು,
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ