ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS / ಕುಂದಾಪುರ: ವರ್ಗಾವಣೆಯ ಹೆಸರಿನಲ್ಲಿ ಜೂಜಾಟ ನಡೆಯುತ್ತಿದೆಯೇ..?

COSTALNEWS / ಕುಂದಾಪುರ: ವರ್ಗಾವಣೆಯ ಹೆಸರಿನಲ್ಲಿ ಜೂಜಾಟ ನಡೆಯುತ್ತಿದೆಯೇ..?

ಕುಂದಾಪುರ: ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕಾದರೆ, ಸರ್ಕಾರದ ಆದೇಶಗಳು ಸಮರ್ಪಕವಾಗಿ ಜಾರಿಯಾಗಬೇಕು. ಆದರೆ ಕುಂದಾಪುರದ ಕಂದಾಯ ಇಲಾಖೆಯ ವರ್ಗಾವಣೆ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಕುಂದಾಪುರದ ಕಂದಾಯ ನಿರೀಕ್ಷಕ ಆರ್‌ಐ ದಿನೇಶ್ ಉದ್ದಾರ್ ಅವರನ್ನು ಹೆಬ್ರಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಕುಂದಾಪುರದಲ್ಲಿ ಮುಂದುವರಿಯಲು ಕಸರತ್ತು ನಡೆಯುತ್ತಿದೆ ಎಂಬ ಆರೋಪದ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಈ ನಡುವೆ ಹೆಬ್ರಿಯಿಂದ ಗುರುಪ್ರಸಾದ್ ಅವರು ಕುಂದಾಪುರಕ್ಕೆ ಹೊಸ ಆರ್‌ಐ ಆಗಿ ಬಂದಿರುವ ಹಿನ್ನೆಲೆಯಲ್ಲಿ, ವರ್ಗಾವಣೆ ಪ್ರಕ್ರಿಯೆಯ ಅನುಷ್ಠಾನದ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಪ್ರಶ್ನೆಗಳು ಮೂಡಿವೆ.
ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದ ಬಳಿಕವೂ ಸಂಬಂಧಪಟ್ಟ ಅಧಿಕಾರಿ ನಿಗದಿತ ಸ್ಥಳಕ್ಕೆ ತೆರಳದಿದ್ದರೆ, ಅದಕ್ಕೆ ಕಾರಣವೇನು? 

ವರ್ಗಾವಣೆ ಆದೇಶದ ಜಾರಿಯಲ್ಲಿ ವಿಳಂಬವಾಗಿದೆಯೇ? ಆಡಳಿತಾತ್ಮಕ ಕಾರಣಗಳಿವೆಯೇ? ಅಥವಾ ಬೇರೆ ಯಾವುದಾದರೂ ಪ್ರಭಾವ ಕೆಲಸ ಮಾಡುತ್ತಿದೆಯೇ? ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಯೇ ಸ್ಪಷ್ಟನೆ ನೀಡಬೇಕಿದೆ.
ಇನ್ನೊಂದೆಡೆ, ವರ್ಗಾವಣೆ ಪ್ರಕ್ರಿಯೆಯಲ್ಲಿ ಹಣದ ಹಾವಳಿ ಇದೆಯೇ ಎಂಬ ಅನುಮಾನಗಳನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹಣಕಾಸಿನ ವ್ಯವಹಾರ ನಡೆದಿದೆ ಎಂಬುದಕ್ಕೆ ಸದ್ಯಕ್ಕೆ ದೃಢಪಟ್ಟ ಸಾಕ್ಷ್ಯ ಬಹಿರಂಗವಾಗಿಲ್ಲ. ಹೀಗಾಗಿ ಈ ಆರೋಪಗಳ ಸತ್ಯಾಸತ್ಯತೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿದಾಗ ಮಾತ್ರ ನಿಜಾಂಶ ಹೊರಬರಲು ಸಾಧ್ಯ.
ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳೇ,
ಸರ್ಕಾರದ ವರ್ಗಾವಣೆ ಆದೇಶಗಳು ಕೇವಲ ಕಾಗದಕ್ಕೆ ಸೀಮಿತವಾಗಬಾರದು. 

ಆದೇಶದ ಅನುಷ್ಠಾನದಲ್ಲಿ ವಿಳಂಬವಾಗಿದ್ದರೆ ಅದರ ಕಾರಣವನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರ್ಗಾವಣೆಗೊಂಡ ಅಧಿಕಾರಿ ಕರ್ತವ್ಯದಿಂದ ಬಿಡುಗಡೆಗೊಂಡಿದ್ದಾರೆಯೇ? ಹೆಬ್ರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವ ಕ್ರಮ ಕೈಗೊಳ್ಳಲಾಗಿದೆ? ವರ್ಗಾವಣೆ ಆದೇಶದ ಅನುಷ್ಠಾನದಲ್ಲಿ ವಿಳಂಬವಾಗಿದ್ದರೆ ಅದರ ಹೊಣೆಗಾರರು ಯಾರು?
ಈ ಎಲ್ಲಾ ಪ್ರಶ್ನೆಗಳಿಗೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.
ವರ್ಗಾವಣೆ ಆದೇಶಕ್ಕೆ ಗೌರವವಿದೆಯೇ? ಅಥವಾ ಆದೇಶಕ್ಕಿಂತ ಪ್ರಭಾವವೇ ಮೇಲಾಗುತ್ತಿದೆಯೇ?
ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಪಾರದರ್ಶಕ ಆಡಳಿತಾತ್ಮಕ ಪರಿಶೀಲನೆ ಅಗತ್ಯ.

ಕುಂದಾಪುರದ ಈ ವರ್ಗಾವಣೆ ವಿಚಾರದಲ್ಲಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.



 ವರದಿ : ದಾಮೋದರ ಮೊಗವೀರ COSTALNEWS ಸಂಪಾದಕರು 

Ads on article

Advertise in articles 1

advertising articles 2

Advertise under the article