ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /ಉಡುಪಿ: “ಬಹುಜನರು ಆಳುವ ದೊರೆಗಳಾಗಬೇಕು, ಗುಲಾಮರಲ್ಲ” – ಜ್ಞಾನಪ್ರಕಾಶ ಸ್ವಾಮೀಜಿ

COSTALNEWS /ಉಡುಪಿ: “ಬಹುಜನರು ಆಳುವ ದೊರೆಗಳಾಗಬೇಕು, ಗುಲಾಮರಲ್ಲ” – ಜ್ಞಾನಪ್ರಕಾಶ ಸ್ವಾಮೀಜಿ

ಉಡುಪಿ: ಈ ದೇಶದ ಬಹುಜನರು ಆಳುವ ದೊರೆಗಳಾಗಬೇಕು ಹೊರತು ಗುಲಾಮರಾಗಬಾರದು. ಆಳುವ ಸಮುದಾಯದ ಲಕ್ಷಣ ಸ್ವಾಭಿಮಾನ ಮತ್ತು ಘನತೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ಉಡುಪಿಯ ಬನ್ನಂಜೆ ಶ್ರೀನಾರಾಯಣಗುರು ಸಭಾಂಗಣದಲ್ಲಿ ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಹಾಗೂ ಅಹಿಂದ ಕುಲಗಳ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷ ಮಹೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಮೂಲ ನಿವಾಸಿಗಳನ್ನು ಮೂಲೆಗುಂಪು ಮಾಡಿ ಅನಾಥರನ್ನಾಗಿಸಲಾಗಿದೆ. ಅವರ ಮತದಾನದ ಹಕ್ಕನ್ನು ಕಿತ್ತುಕೊಂಡು ದೇಶದ್ರೋಹಿಗಳನ್ನಾಗಿ ಮಾಡುವ ಸಂಚು ನಡೆಯುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದರು.
ಭಾರತದ ಇತಿಹಾಸದ ಕುರಿತು ಮಾತನಾಡಿದ ಅವರು, ಈಗಿರುವ ಇತಿಹಾಸ ಭಾರತದ ನೈಜ ಇತಿಹಾಸವಲ್ಲ. ಬ್ರಾಹ್ಮಣ್ಯ ಮತ್ತು ಬೌದ್ಧ, ದ್ರಾವಿಡರು ಮತ್ತು ಆರ್ಯರು, ವೈದಿಕ ಮತ್ತು ಅವೈದಿಕರ ನಡುವಿನ ಸಂಘರ್ಷವೇ ಇಲ್ಲಿನ ಇತಿಹಾಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಸುರರು ಎಂದರೆ ಶೀಲವಂತರು, ದಾನವಂತರು ಹಾಗೂ ರಕ್ಷಕರು. ದೇಶ, ಪ್ರಕೃತಿ ಮತ್ತು ಜನರನ್ನು ರಕ್ಷಿಸಿದ ಮಹಿಷಾಸುರ ಸೇರಿದಂತೆ ಹಲವು ಮಹಾಪುರುಷರನ್ನು ರಾಕ್ಷಸರಂತೆ ಚಿತ್ರಿಸಲಾಗಿದೆ. ಈ ಮೂಲಕ ದೇಶದ ಇತಿಹಾಸವನ್ನು ಪುಟಪುಟಗಳಲ್ಲಿ, ಪದಪದಗಳಲ್ಲಿ ತಿರುಚಲಾಗಿದೆ ಎಂದು ಅವರು ಹೇಳಿದರು.
ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಮುದಾಯವು ಅಧಿಕಾರ ಹಾಗೂ ಹಕ್ಕುಗಳಿಂದ ವಂಚಿತವಾಗಿ ನಾಶವಾಗುವ ಅಪಾಯವಿದೆ. ಈ ದೇಶವನ್ನು ಕಟ್ಟಿದ ಮೂಲನಿವಾಸಿಗಳು ಇಂದು ಬೀದಿಯಲ್ಲಿದ್ದರೆ, ಹೊರಗಿನಿಂದ ಬಂದವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದಕ್ಕೆ ನಮ್ಮ ಇತಿಹಾಸವನ್ನು ಅಧ್ಯಯನ ಮಾಡದಿರುವುದೇ ಕಾರಣ. ಇದು ನಮಗೆ ನಾವೇ ಮಾಡಿಕೊಂಡ ದ್ರೋಹ ಮತ್ತು ವಂಚನೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮತ್ತು ಹಿರಿಯ ಚಿಂತಕ ನಾರಾಯಣ ಮಣೂರು ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು. ಪರಮೇಶ್ವರ್ ಹಾಗೂ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಅವರನ್ನು ಸನ್ಮಾನಿಸಲಾಯಿತು.
ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು, ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಉಪಸ್ಥಿತರಿದ್ದರು. ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾಕರ ಮಲ್ಪೆ ಸ್ವಾಗತಿಸಿದರು. ರವಿರಾಜ್ ಲಕ್ಷ್ಮೀನಗರ ವಂದಿಸಿದರು. ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಕಲಾವಿದ ಶಂಕರ್‌ದಾಸ್ ಚೇಂಡ್ಕಳ ತಂಡ ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಿತು.

Ads on article

Advertise in articles 1

advertising articles 2

Advertise under the article