COSTALNEWS ವಿಶೇಷ ವರದಿ/ ಕುಂದಾಪುರ: ಕರಾವಳಿ ಮಣ್ಣಿನಲ್ಲಿ ಕೇವಲ ದೇವಾಲಯಗಳ ಇತಿಹಾಸವಷ್ಟೇ ಅಲ್ಲ…ತಲೆತಲಾಂತರಗಳಿಂದ ಬಂದಿರುವ ಅನೇಕ ಸಾಂಪ್ರದಾಯಿಕ ಕಲೆ–ಸಂಸ್ಕೃತಿಗಳ ನಾದವೂ ಅಡಗಿದೆ. ಬಸವರಾಜ್ ಮುಳ್ಳಿಕಟ್ಟೆ
Friday, October 2, 2026
ಕುಂದಾಪುರ: ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ವಾಯುವ್ಯ ಹಾಗೂ ಈಶಾನ್ಯ ಭಾಗಗಳಿಂದ ಕರಾವಳಿಗೆ ವಲಸೆ ಬಂದ ಅನೇಕ ಸಮುದಾಯಗಳು ತಮ್ಮೊಂದಿಗೆ ತಂದಿದ್ದ ಕಲೆ, ಸಂಗೀತ ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಇಲ್ಲಿನ ಜನರಿಗೆ ಪರಿಚಯಿಸುತ್ತಿದ್ದರು ಎನ್ನಲಾಗುತ್ತದೆ.
ಕಾಲ ಬದಲಾಗಿದೆ…
ಜೀವನಶೈಲಿ ಬದಲಾಗಿದೆ…
ಹೊಸ ಪೀಳಿಗೆ ಶಿಕ್ಷಣ ಹಾಗೂ ಆಧುನಿಕತೆಯತ್ತ ಸಾಗುತ್ತಿದೆ…
ಇದರ ನಡುವೆ ತಲೆತಲಾಂತರಗಳಿಂದ ಉಳಿದು ಬಂದಿದ್ದ ಕೆಲವು ಸಾಂಪ್ರದಾಯಿಕ ಕಲೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಭಾಗದ ಹಕ್ಕಿಪಿಕ್ಕಿ ಸಮುದಾಯದ ಹಾರ್ಮೋನಿಯಂ ಕಲಾವಿದ ಬಸವರಾಜ್ ಅವರು ತಮ್ಮ ನೋವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ತ್ರಾಸಿ, ತಲ್ಲೂರು, ಹಟ್ಟಿಯಂಗಡಿ, ಮುಳ್ಳಿಕಟ್ಟೆ ಹಾಗೂ ಗಂಗೊಳ್ಳಿ ಭಾಗಗಳಲ್ಲಿ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಸಮುದಾಯಗಳು ವಾಸಿಸುತ್ತಿದ್ದು, ತಮ್ಮದೇ ಆದ ಕಲೆ–ಪರಂಪರೆಯನ್ನು ಉಳಿಸಿಕೊಂಡಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
(ಬಸವರಾಜ್ ಮುಳ್ಳಿಕಟ್ಟೆ )
ಅದರಲ್ಲೂ ಹಾಲಕ್ಕಿ ಹಾಗೂ ಕಿನ್ನರಜೋಗಿ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳು ಮತ್ತು ಕಲಾ ಪರಂಪರೆಗಳು ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದು ಬಸವರಾಜ್ ಹೇಳಿದ್ದಾರೆ.
ಇದೀಗ ತಮ್ಮ ಸಮುದಾಯದಲ್ಲಿಯೂ ಹಾರ್ಮೋನಿಯಂ ನುಡಿಸುವಂತಹ ಸಾಂಪ್ರದಾಯಿಕ ಕಲೆಯ ಪರಂಪರೆ ಕೊನೆಯ ಹಂತದಲ್ಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
“ನಮ್ಮ ಜನಾಂಗದ ಮಕ್ಕಳು ವಿದ್ಯಾಭ್ಯಾಸ ಮಾಡಿ ಮುಂದೆ ಸಾಗುತ್ತಿದ್ದಾರೆ. ಆದರೆ ಇದರೊಂದಿಗೆ ನಮ್ಮ ಪೂರ್ವಜರಿಂದ ಬಂದಿದ್ದ ಈ ಕಲೆ–ಪರಂಪರೆಯನ್ನು ಮರೆತು ಹೋಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಈ ಸಾಂಪ್ರದಾಯಿಕ ಪದ್ಧತಿಗಳನ್ನು ಹೇಳಿಕೊಡುವವರು ಯಾರು? ಕೇಳುವವರು ಯಾರು?”
ಎಂಬ ಪ್ರಶ್ನೆಯನ್ನು ಬಸವರಾಜ್ ಅವರು ನೋವಿನಿಂದ ಮುಂದಿಟ್ಟಿದ್ದಾರೆ.
ಒಮ್ಮೆ ಮನೆ–ಮನೆಯ ಅಂಗಳದಲ್ಲಿ, ಹಬ್ಬ–ಹರಿದಿನಗಳಲ್ಲಿ ಹಾಗೂ ಸಾಂಪ್ರದಾಯಿಕ ಸಂದರ್ಭಗಳಲ್ಲಿ ಮೊಳಗುತ್ತಿದ್ದ ನಾದ…
ಇಂದು ನೆನಪಾಗಿ ಉಳಿಯುವ ಹಂತಕ್ಕೆ ಬಂದಿದೆಯೇ?
ಪರಂಪರೆ ಎಂದರೆ ಕೇವಲ ಹಳೆಯ ನೆನಪುಗಳಲ್ಲ…
ಅದು ಒಂದು ಜನಾಂಗದ ಗುರುತು…
ಒಂದು ಪ್ರದೇಶದ ಸಂಸ್ಕೃತಿ…
ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಬೇಕಾದ ಅಮೂಲ್ಯ ಪರಂಪರೆ.
ಈ ಪರಂಪರೆ ಉಳಿಯಬೇಕಾದರೆ ಹಿರಿಯರ ನೆನಪುಗಳು, ಕಲಾವಿದರ ಕಲೆ ಹಾಗೂ ಯುವ ಪೀಳಿಗೆಯ ಆಸಕ್ತಿ — ಈ ಮೂರೂ ಒಂದಾಗಬೇಕಿದೆ.
ಕರಾವಳಿಯ ಮಣ್ಣಿನಲ್ಲಿ ಒಮ್ಮೆ ಮೊಳಗಿದ ಆ ಹಾರ್ಮೋನಿಯಂ ನಾದ…
ಮುಂದಿನ ಪೀಳಿಗೆಯಲ್ಲೂ ಕೇಳಿಸಬೇಕೇ?
ಅಥವಾ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯಬೇಕೇ?
ಇದು ಬಸವರಾಜ್ ಅವರ ಅಳಲಿನ ಹಿಂದಿರುವ ದೊಡ್ಡ ಪ್ರಶ್ನೆ.
..!. ???
ವಿಶೇಷ ವರದಿ : ದಾಮೋದರ್ ಮೊಗವೀರ ನಾಯಕವಾಡಿ COSTALNEWS ಸಂಪಾದಕರು