COSTALNEWS / ಗಂಗೊಳ್ಳಿ: ‘ಸ್ವಚ್ಛತೆಯೇ ಸೇವೆ–2026’ ಅಂಗವಾಗಿ ಸಮುದ್ರ ತೀರ ಸ್ವಚ್ಛತಾ ಅಭಿಯಾನ..!
Friday, October 2, 2026
ಗಂಗೊಳ್ಳಿ:
ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ, ವಿವಿಧ ಇಲಾಖೆಗಳು ಹಾಗೂ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ‘ಸ್ವಚ್ಛತೆಯೇ ಸೇವೆ–2026’ ಕಾರ್ಯಕ್ರಮದ ಅಂಗವಾಗಿ ಮಲ್ಯರಬೆಟ್ಟು ಬಳಿ ಸಮುದ್ರ ಕಿನಾರೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಗಂಗೊಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಎಸ್ಎಲ್ಆರ್ಎಂ ಘಟಕ, ಗಂಗೋತ್ರಿ ಸಂಜೀವಿನಿ ಒಕ್ಕೂಟ, ಕೆಥೋಲಿಕ್ ಸಭೆ, ಅಮೃತ ಮಹಾ ಸಂಘ, ಸ್ಟೆಲ್ಲಾ ಮೆರೀಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ರೋಟರಿ ಕ್ಲಬ್ ಗಂಗೊಳ್ಳಿ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಈ ಅಭಿಯಾನಕ್ಕೆ ಕೈಜೋಡಿಸಿದವು.
ಸುಮಾರು 200 ಮಂದಿ ಶ್ರಮದಾನಿಗಳು ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಅಂದಾಜು 1000 ಕೆ.ಜಿ.ಗೂ ಅಧಿಕ ಒಣ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ತಬ್ರೇಜ್, ಸದಸ್ಯರು, ಅಭಿವೃದ್ಧಿ ಅಧಿಕಾರಿ ರವಿ ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ, ಗಂಗೋತ್ರಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಕೆಥೋಲಿಕ್ ಸಭೆ, ಅಮೃತ ಮಹಾ ಸಂಘದ ಸದಸ್ಯರು, ಸ್ಟೆಲ್ಲಾ ಮೆರೀಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಕ್ರೆಸೆನ್ಸ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು, ರೋಟರಿ ಕ್ಲಬ್ ಅಧ್ಯಕ್ಷೆ ಮಾಲಾಶ್ರೀ ಖಾರ್ವಿ, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.