COSTALNEWS/ ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.) ವತಿಯಿಂದ 5ನೇ ವರ್ಷದ ‘ಅಬ್ಬರದ ಉಡುಪಿ ಪಿಲಿನಲಿಕೆ’ ಕಾರ್ಯಕ್ರಮ
Wednesday, September 2, 2026
ಉಡುಪಿ: ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿಯ ಭವ್ಯ ವೇದಿಕೆಯಲ್ಲಿ ಶುಕ್ರವಾರ ಸಂಜೆ 4.30ರಿಂದ ಕಾರ್ಯಕ್ರಮ ನಡೆಯಲಿದ್ದು, ಆಹ್ವಾನಿತ ತಂಡಗಳಿಂದ ಸಾಂಪ್ರದಾಯಿಕ ಹುಲಿವೇಷ, ಕಿನ್ನಿಪಿಲಿ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಶಶಿರಾಜ್ ಕುಂದರ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಹಾಸ್ಯ ನಟ ಟೆನ್ನಿಸ್ ಕೃಷ್ಣ, ನಟ ಅರ್ಜುನ್ ಕಾಪಿಕಾಡ್, ನಟಿ ಸುಕೃತ ವಾಗ್ಲೆ, ಜ್ಯೂನಿಯರ್ ಮಾಡೆಲ್ ಸಚಿತಾ ರಾವ್, ಮಾಡೆಲ್ ಸ್ಪೂರ್ತಿ ಶೆಟ್ಟಿ ನಟಿ ರೂಪಾ ವರ್ಕಾಡಿ, “ಟಾಸ್” ಚಿತ್ರತಂಡ ಹಾಗೂ “ಬನ” ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ..
ಟೈಗರ್ ಫ್ರೆಂಡ್ಸ್ ತಂಡವು ಕಳೆದ ಸುಮಾರು ಹತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಬಡ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಶಾಲಾ ಬ್ಯಾಗ್ ವಿತರಣೆ, ರಕ್ತದಾನ, ಅಂಗನವಾಡಿಗಳಿಗೆ ಅಗತ್ಯ ಪರಿಕರಗಳ ನೆರವು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸುವುದು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.
ಅನಾಥ ಮಕ್ಕಳ ಶಾಲಾ ವೆಚ್ಚವನ್ನೂ ಭರಿಸುವ ಮೂಲಕ ಶಿಕ್ಷಣಕ್ಕೆ ನೆರವಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಶಶಿರಾಜ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ‘ಟೈಗರ್ ಫ್ರೆಂಡ್ಸ್ ಉಡುಪಿ’ ಎಂಬ ಹೆಸರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತುಳುನಾಡಿನ ಸಾಂಪ್ರದಾಯಿಕ ಕಲೆಯಾದ ಹುಲಿವೇಷವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ‘ಅಬ್ಬರದ ಉಡುಪಿ ಪಿಲಿನಲಿಕೆ’ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
ಕಳೆದ ವರ್ಷದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ದಿವ್ಯಹಸ್ತದಿಂದ ಸಂಘವು ‘ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.)’ ಎಂದು ಅಧಿಕೃತವಾಗಿ ಅನಾವರಣಗೊಂಡಿತ್ತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಾರ್ವಜನಿಕರು ಹಾಗೂ ಗಣ್ಯರ ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಟ್ರಸ್ಟ್ ಮನವಿ ಮಾಡಿದೆ.