COSTALNEWS/ಬೈಂದೂರು: 1033 ಸಹಾಯವಾಣಿ ವಿರುದ್ಧ ಸಾರ್ವಜನಿಕರ ಆಕ್ರೋಶ..!ತುರ್ತು ಸಂದರ್ಭದಲ್ಲಿ ಕರೆ ಮಾಡಿದರೂ ಸ್ಪಂದನೆ ಇಲ್ಲವೇ?
Monday, September 14, 2026
ಬೈಂದೂರು: ಕುಂದಾಪುರ–ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಸಂದರ್ಭದಲ್ಲಿ ನೆರವು ನೀಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 1033 ಸಹಾಯವಾಣಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಗೆ, ಉಪ್ಪುಂದ ಶಾಲೆ ಬಾಗಿಲು ಸಮೀಪ ಮೀನು ತುಂಬಿಕೊಂಡು ತೆರಳುತ್ತಿದ್ದ ಟೆಂಪೋವೊಂದು ಹಿಂದಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ.
ಪರಿಣಾಮ ಟೆಂಪೋ ರಸ್ತೆ ವಿಭಾಜಕದ ನಡುವೆ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್ ವಿಭಾಜಕದ ಮಧ್ಯದಲ್ಲಿದ್ದ ದೀಪದ ಕಂಬಕ್ಕೆ ವಾಹನ ತಾಗಿ ನಿಂತಿದೆ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಅಪಘಾತದ ಬಳಿಕ ನೆರವಿಗಾಗಿ ಚಾಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 1033 ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಆರೋಪಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗೆ ಬರಬೇಕಾದ ಸಹಾಯವಾಣಿಯೇ ಅಗತ್ಯ ಸಮಯದಲ್ಲಿ ಸ್ಪಂದಿಸದಿದ್ದರೆ, ಇಂತಹ ಸಹಾಯವಾಣಿಯಿಂದ ಏನು ಪ್ರಯೋಜನ? ಎಂದು ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.