COSTALNEWS | ವಿಶೇಷ ವರದಿ ಮುಳ್ಳಿಕಟ್ಟೆಯಲ್ಲಿ ಭರ್ಜರಿ ಉದ್ಘಾಟನೆ: ಶಂಕರ್ ನಾಗ್ ರಿಕ್ಷಾ ನಿಲ್ದಾಣಕ್ಕೆ ಚಾಲನೆ!
Saturday, August 15, 2026
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಂಕರ್ ನಾಗ್ ರಿಕ್ಷಾ ನಿಲ್ದಾಣ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.
ಶಾಸಕ ಗುರುರಾಜ್ ಗಂಟೆಹೊಳೆ, ಉದ್ಯಮಿ ರಾಜೇಶ್ ಕಾರಂತ್ ಉಪ್ಪಿನಕುದ್ರು, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಹಾಗೂ ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್. ಅವರು ನೂತನ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕ ದಿನೇಶ್ ಆಚಾರ್ ಆಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
“ಉಡುಪಿ ಜಿಲ್ಲೆಯಲ್ಲಿ ಇಂತಹ ದೊಡ್ಡ ರಿಕ್ಷಾ ನಿಲ್ದಾಣ ಇರೋದು ಖುಷಿಯ ವಿಚಾರ”
ರಿಕ್ಷಾ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟೆಹೊಳೆ, ಉಡುಪಿ ಜಿಲ್ಲೆಯಲ್ಲಿ ಇಷ್ಟು ವಿಶಾಲ ಹಾಗೂ ಸುಸಜ್ಜಿತವಾದ ರಿಕ್ಷಾ ನಿಲ್ದಾಣ ನಿರ್ಮಾಣವಾಗಿರುವುದು ಸಂತಸದ ವಿಚಾರ ಎಂದು ಹೇಳಿದರು.
ಮುಳ್ಳಿಕಟ್ಟೆಯ ಶಂಕರ್ ನಾಗ್ ರಿಕ್ಷಾ ನಿಲ್ದಾಣವು ಕೇವಲ ರಿಕ್ಷಾ ಚಾಲಕರಿಗೆ ಅನುಕೂಲವಾಗುವ ಸ್ಥಳವಲ್ಲದೆ, ಸ್ಥಳೀಯ ಬಡ ಕುಟುಂಬಗಳ ವಿವಿಧ ಕಾರ್ಯಕ್ರಮಗಳಿಗೂ ಸಹಕಾರಿಯಾಗುವಂತಹ ವ್ಯವಸ್ಥೆ ಹೊಂದಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ರಿಕ್ಷಾ ನಿಲ್ದಾಣ ನಿರ್ಮಾಣಕ್ಕಾಗಿ ಚಾಲಕರು ಶ್ರಮವಹಿಸಿರುವುದನ್ನು ಶ್ಲಾಘಿಸಿದ ಅವರು, ನಿಲ್ದಾಣದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಉದ್ಯಮಿ ರಾಜೇಶ್ ಕಾರಂತ್ ಉಪ್ಪಿನಕುದ್ರು, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್, ದುಬೈ ಉದ್ಯಮಿ ಮಂಜುನಾಥ್ ಪೂಜಾರಿ ಸೇನಾಪುರ , ರಾಘು ಶೆಟ್ಟಿ ಮುಳ್ಳಿಕಟ್ಟೆ, ಎಂ.ಎಂ. ಸುವರ್ಣ, ರಾಘು ಆಚಾರ್
ಆರಾಟೆ , ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಳ್ಳಿಕಟ್ಟೆ ಶಂಕರ್ ನಾಗ್ ರಿಕ್ಷಾ ನಿಲ್ದಾಣದ ಅಧ್ಯಕ್ಷ ಮಹೇಶ್ ಮೊಗವೀರ ಹಾಗೂ ರಿಕ್ಷಾ ಚಾಲಕರು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾಗಿ ಶ್ರಮಿಸಿದರು.
ಮುಳ್ಳಿಕಟ್ಟೆಯ ರಿಕ್ಷಾ ಚಾಲಕರ ಹಲವು ದಿನಗಳ ಶ್ರಮಕ್ಕೆ ಇಂದು ಫಲ ಸಿಕ್ಕಿದ್ದು, ಸುಸಜ್ಜಿತ ಶಂಕರ್ ನಾಗ್ ರಿಕ್ಷಾ ನಿಲ್ದಾಣ ಇದೀಗ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.
ಕಾರ್ಯಕ್ರಮದ ನಿರೂಪಣೆ ಧನ್ಯವಾದ : ಕರಾವಳಿ ಭಾಗದ ಅತ್ಯುತ್ತಮ ನಿರೂಪಕ ಮಣಿಕಂಠ ಕೋಟೇಶ್ವರ ವಹಿಸಿದರು