COSTALNEWS/ SDM ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಪತ್ರಕರ್ತನ ಮಗಳು ಬಲಿಪಶು? ಕಾವಂದರ ಮನೆ ಮುಂದೆ ಬೃಹತ್ ಹೋರಾಟದ ಎಚ್ಚರಿಕೆ!
Friday, August 21, 2026
ವಿಜಯಪುರ ಜಿಲ್ಲೆಯ 'ಕಾನಿಪ ಧ್ವನಿ' ಪ್ರಮುಖರಾದ ಚಂದು ಜಾಧವ್ ಅವರ ಕುಟುಂಬಕ್ಕೆ ಎದುರಾಗಿದೆ ಚಿಕಿತ್ಸೆಯ ಲೋಪದ ದೊಡ್ಡ ಆಘಾತ. ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಸ್ಪೆಷಾಲಿಟಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ, ಹಲ್ಲಿನ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಆದರೆ, ಈ ಶಸ್ತ್ರಚಿಕಿತ್ಸೆಯ ಬೆನ್ನಲ್ಲೇ ಗೀತಾ ಗಂಗಾರಾಮ್ ಚೌಹಾಣ್(35 ವರ್ಷ) ಹೆಣ್ಣುಮಗಳಿಗೆ ಕಿಡ್ನಿ ವೈಫಲ್ಯ ಹಾಗೂ ಬ್ರೈನ್ ಸಂಬಂಧಿತ ತೀವ್ರ ಕಾಯಿಲೆಗಳು ಕಾಣಿಸಿಕೊಂಡಿದ್ದು, ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ!
ಧಾರವಾಡದ ಎಸ್ ಡಿ ಎಮ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ನೇರ ಕಾರಣ ಎಂದು ಜಾಧವ್ ಕುಟುಂಬಸ್ಥರು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲಿನ ಶಸ್ತ್ರಚಿಕಿತ್ಸೆ ಬಳಿಕ ಮಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸಿದ್ದು, ಇಂದು-ನಾಳೆಯೋ ಎಂಬಂತಾಗಿದೆ.
ತಮ್ಮ ಮಗಳ ಈ ಹೃದಯವಿದ್ರಾವಕ ಸ್ಥಿತಿಯನ್ನು ಕಂಡು ಕಂಗೆಟ್ಟ ಚಂದು ಜಾಧವ್ ಅವರು 'ವಿಶ್ವ ದರ್ಶನ' ದಿನಪತ್ರಿಕೆಯ ಸಂಪಾದಕರಾದ ಎಸ್.ಎಸ್. ಪಾಟೀಲ್ ಅವರ ಮೂಲಕ 'ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ'ಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರಿಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆಯವರು ಅದೇ ದಿನ ರಾತ್ರಿ ಧಾರವಾಡದ SDM ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು. ಗುಲ್ಬರ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಯುವತಿಯ ಜೀವನದ ಜೊತೆ ಚೆಲ್ಲಾಟವಾಡಿದ ವೈದ್ಯರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘ ಆಗ್ರಹಿಸಿದೆ.
ಮಲ್ಲಿಕಾರ್ಜುನ ಬಂಗ್ಲೆ (ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಅವರ ನೇರ ಎಚ್ಚರಿಕೆ:
"SDM ಆಸ್ಪತ್ರೆಯ ಸಂಸ್ಥಾಪಕರೂ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಪೂಜ್ಯ ಡಾ. ವೀರೇಂದ್ರ ಹೆಗಡೆಯವರು ಈ ಅನಾಹುತಕ್ಕೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ, ಇನ್ನು ಒಂದು ವಾರದೊಳಗೆ ಧರ್ಮಸ್ಥಳದಲ್ಲಿರುವ ಅವರ ನಿವಾಸದ ಮುಂದೆ ಚಂದು ಜಾಧವ್ ಕುಟುಂಬ ಹಾಗೂ ಸಾರ್ವಜನಿಕರೊಂದಿಗೆ ಕಾನಿಪ ಧ್ವನಿ ವತಿಯಿಂದ ಬೃಹತ್ ಪ್ರತಿಭಟನೆ ಮತ್ತು ಹೋರಾಟ ನಡೆಸಲಾಗುವುದು."
ಒಂದು ಸಣ್ಣ ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋದ ಹೆಣ್ಣುಮಗಳು ಇಂದು ಆಸ್ಪತ್ರೆಯ ಹಾಸಿಗೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವುದು ಇಡೀ ಮಾಧ್ಯಮ ಲೋಕ ಹಾಗೂ ಸಾರ್ವಜನಿಕರ ಮನ ಮಿಡಿಯುವಂತೆ ಮಾಡಿದೆ. ಈ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಡಾ. ವೀರೇಂದ್ರ ಹೆಗಡೆಯವರು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.