COSTALNEWS/ ಬೈಂದೂರು: ಆಲೂರು ಎರಡು ಕುಟುಂಬಗಳ ನಡುವೆ 70 ವರ್ಷದ ಜಮೀನು ವಿವಾದ: ಪರಸ್ಪರ ಹಲ್ಲೆ – ಗಂಗೊಳ್ಳಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು
Monday, August 17, 2026
ಗಂಗೊಳ್ಳಿ: ಬೈಂದೂರು ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಬೆದರಿಕೆ ಆರೋಪದಡಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಪ್ರಕರಣ ದಾಖಲಾಗಿದೆ.
ಆಲೂರು ಗ್ರಾಮದ ಸರೋಜ (48) ಅವರು ನೀಡಿದ ದೂರಿನಂತೆ, ನೆರೆಕರೆಯ ನಿವಾಸಿ ವಸಂತ ಶೆಟ್ಟಿ ಹಾಗೂ ಅವರ ಪುತ್ರ ಅಕ್ಷಯ ಶೆಟ್ಟಿ ಜಾಗದ ವಿಚಾರವಾಗಿ ತಮ್ಮೊಂದಿಗೆ ತಕರಾರು ಹೊಂದಿದ್ದು, ಪ್ರಕರಣವು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆ.16ರಂದು ಮಧ್ಯಾಹ್ನ 1.30ರ ಸುಮಾರಿಗೆ ಮುಕಾಂಬುರವರ ಮನೆಯ ಹೊರಗಡೆ ಇದ್ದಾಗ ವಸಂತ ಶೆಟ್ಟಿ ಹಾಗೂ ಅಕ್ಷಯ ಶೆಟ್ಟಿ ಅವರು ಜಾಗದ ವಿಚಾರವಾಗಿ ತಮ್ಮೊಂದಿಗೆ ಜಗಳ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ಷಯ ಶೆಟ್ಟಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಲ್ಲದೆ, ಗದ್ದೆಯ ಮರದ ಬೇಲಿಯನ್ನು ಕತ್ತಿಯಿಂದ ಕಡಿದು ಹಾಕುತ್ತಿದ್ದ ವೇಳೆ ತಡೆಯಲು ಹೋದಾಗ ಹಾರೆಯಿಂದ ಮುಖಕ್ಕೆ ಮತ್ತು ತಲೆಗೆ ಹೊಡೆಯಲು ಬೀಸಿದ್ದು, ಏಟು ಬಲಕೈ ಬೆರಳಿಗೆ ತಾಗಿ ರಕ್ತಗಾಯವಾಗಿದೆ ಎಂದು ಸರೋಜ ದೂರಿನಲ್ಲಿ ತಿಳಿಸಿದ್ದಾರೆ.
ವಸಂತ ಶೆಟ್ಟಿ ಗದ್ದೆಗೆ ನುಗ್ಗಿ ಸಾಗುವಳಿ ಮಾಡಿದ್ದ ಜಾಗವನ್ನು ಹಾಳು ಮಾಡಿರುವುದಾಗಿಯೂ ಆರೋಪಿಸಲಾಗಿದೆ
ಇದಕ್ಕೆ ಪ್ರತಿಯಾಗಿ ವಸಂತ ಶೆಟ್ಟಿ (70) ಅವರು ನೀಡಿದ ದೂರಿನಂತೆ, ಸರ್ವೇ ನಂಬರ್ 26/5ರ 28 ಸೆಂಟ್ಸ್ ಜಾಗದಲ್ಲಿ ತಾವು ವ್ಯವಸಾಯ ಮಾಡುತ್ತಿದ್ದು, ಹಳೆಯ ಬೇಲಿಯನ್ನು ಸರಿಪಡಿಸಲು ಪುತ್ರ ಅಕ್ಷಯ ಶೆಟ್ಟಿಯೊಂದಿಗೆ ತೆರಳಿದ್ದ ವೇಳೆ ಸರೋಜ ಹಾಗೂ ಮುಕಾಂಬುರವರು ಬೇಲಿ ಮುಟ್ಟದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಕೈಯಲ್ಲಿದ್ದ ಹಾರೆ ಹಾಗೂ ಕತ್ತಿಯನ್ನು ಕಸಿಯಲು ಮುಂದಾದ ವೇಳೆ ಸರೋಜ ಅವರು ಮರದ ಕೋಲಿನಿಂದ ತಮ್ಮ ತಲೆಗೆ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ವಸಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಅಕ್ಷಯ ಶೆಟ್ಟಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ,
ಎರಡೂ ದೂರುಗಳ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2026 ಮತ್ತು 41/2026ರಂತೆ BNS ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಪ್ಪು ಮಾಡಿದವರ ವಿರುದ್ಧ ತಕ್ಷಣ ಬಂಧಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ, ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕೊಲೆ , ಬೆದರಿಕೆ , ಕಳ್ಳತನ , ಗುಂಪು ಘರ್ಷಣೆ , ಹೊಡೆದಾಟ ನಿರಂತರ ನಡೆಯುತ್ತಿದ್ದು ಸಾರ್ವಜನಿಕರ ಅಭಿಪ್ರಾಯದಂತೆ ಪೊಲೀಸರ ಭಯ ಸ್ವಲ್ಪ ಕಮ್ಮಿಯಾಗಿದೆ ಎಂಬುದು ಗುಸು-ಗುಸು ಸುದ್ದಿ, ಪೊಲೀಸ್ ಇಲಾಖೆ ತಕ್ಷಣ ಇಂತಹ ಪ್ರಕರಣ ಕೋರುವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ