COSTALNEWS /ತಂದೆ-ತಾಯಿಯ ನೆನಪಿಗೆ 15ನೇ ವರ್ಷದ ಪುಣ್ಯತಿಥಿ ಆಚರಣೆ:ಮಾತೃ–ಪಿತೃ ಋಣ ಸ್ಮರಿಸಿದ ಮಗ ಶಿವ ಆರ್. ಪೂಜಾರಿ
Monday, August 10, 2026
ಬೈಂದೂರು: ಹೆತ್ತ ತಂದೆ-ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೆ ಅವರ ನೆನಪನ್ನು ಶಾಶ್ವತವಾಗಿ ಉಳಿಸಿಕೊಂಡು, ಅವರ ಪುಣ್ಯತಿಥಿಯನ್ನು ಪ್ರತಿವರ್ಷ ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕಾರ್ಯವೊಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮದ ಆನ್ ಗೋಡು ಭಾಗದಲ್ಲಿ ಗಮನ ಸೆಳೆದಿದೆ.
ಹೌದು ದೊಡ್ಡಮ್ಮ ಹಾಗೂ ರಾಮ ಪೂಜಾರಿ ಅವರ 15ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅವರ ಪುತ್ರ ಶಿವ ಆರ್. ಪೂಜಾರಿ ಅವರು ಕುಟುಂಬ ಸಮೇತರಾಗಿ ವಿಶೇಷವಾಗಿ ಪುಣ್ಯತಿಥಿ ಕಾರ್ಯಕ್ರಮವನ್ನು ನೆರವೇರಿಸಿದರು.
ತಂದೆ-ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ, ಕಳೆದ 14 ವರ್ಷಗಳಿಂದ ಸತತವಾಗಿ ಅವರ ದೈವಾಧೀನರಾದ ದಿನದಂದು ಪುಣ್ಯತಿಥಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಶಿವ ಪೂಜಾರಿ, ಈ ಬಾರಿಯೂ ತಮ್ಮ ಜಮೀನಿನಲ್ಲಿ ಕುಟುಂಬಸ್ಥರು ಹಾಗೂ ಬಂಧು-ಬಳಗದೊಂದಿಗೆ ತಂದೆ-ತಾಯಿಯನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದರು.
ಇದು ಕೇವಲ ಒಂದು ಪುಣ್ಯತಿಥಿ ಕಾರ್ಯಕ್ರಮವಲ್ಲ...ಹೆತ್ತವರನ್ನು ಮರೆಯದ ಮಗನ ಕೃತಜ್ಞತೆಯ ಸಂಕೇತ. ತಂದೆ-ತಾಯಿಯ ಆಶೀರ್ವಾದವೇ ಜೀವನದ ದೊಡ್ಡ ಶಕ್ತಿ ಎಂಬ ನಂಬಿಕೆಯಿಂದ, ಅವರ ನೆನಪು ಸದಾ ಕುಟುಂಬದಲ್ಲಿ ಜೀವಂತವಾಗಿರಬೇಕು ಎಂಬ ಉದ್ದೇಶದಿಂದ ಶಿವ ಪೂಜಾರಿ ಅವರು ಪ್ರತಿವರ್ಷ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಕರವೇ ರಕ್ಷಣಾ ವೇದಿಕೆ ಸೈನಿಕರು , ಅಕ್ಕಪಕ್ಕದ ಮನೆಯವರು, ಕುಟುಂಬಸ್ಥರು ಹಾಗೂ ಬಂಧುಗಳು ಉಪಸ್ಥಿತರಿದ್ದು, ದೈವಾಧೀನರಾದ ದೊಡ್ಡಮ್ಮ ಹಾಗೂ ರಾಮ ಪೂಜಾರಿ ಅವರಿಗೆ ಗೌರವ ಸಲ್ಲಿಸಿದರು.
ಹೆತ್ತವರ ನೆನಪನ್ನು 15ನೇ ವರ್ಷದವರೆಗೂ ಮಾತ್ರವಲ್ಲ, ಜೀವನಪೂರ್ತಿ ಉಳಿಸಿಕೊಂಡು ಸಾಗುವ ಶಿವ ಆರ್. ಪೂಜಾರಿ ಅವರ ಈ ಕಾರ್ಯ ನಿಜಕ್ಕೂ ಸಮಾಜಕ್ಕೆ ಒಂದು ಉತ್ತಮ ಸಂದೇಶವಾಗಿದೆ.
ವರದಿ: ದಾಮೋದರ ಎಂ. ಕೋಸ್ಟಲ್ ನ್ಯೂಸ್ ಕುಂದಾಪುರ