Udupi:ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಪೊಲೀಸ್ ವಶಕ್ಕೆ : ಚಾಲಕ ಪರಾರಿ…!!
Tuesday, June 2, 2026
ಕೋಟ: ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನದ ಮೇಲೆ ಕೋಟ ಪೊಲೀಸರು ದಾಳಿ ನಡೆಸಿ ಟಿಪ್ಪರ್ ಹಾಗೂ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂ.1 ರಂದು ಮಧ್ಯಾಹ್ನ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಹಾಂತೇಶ್ ಜಾಬಗೌಡ ಅವರು ಸಿಬ್ಬಂದಿಯೊಂದಿಗೆ ಗಸ್ತು ಕಾರ್ಯದಲ್ಲಿದ್ದ ವೇಳೆ, ಉಪ್ಲಾಡಿ ತೆಂಕಬೆಟ್ಟು ಪ್ರದೇಶದಲ್ಲಿ ಟಿಪ್ಪರ್ ವಾಹನದ ಮೂಲಕ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ ಎಂದು ತಿಳಿದು ಬಂದಿದೆ.
ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಟಿಪ್ಪರ್ ವಾಹನವನ್ನು ತಡೆಹಿಡಿಯಲು ಮುಂದಾದರು.
ಈ ಸಂದರ್ಭ ವಾಹನ ಚಾಲಕನು ಟಿಪ್ಪರ್ ಹಾಗೂ ಅದರಲ್ಲಿದ್ದ ಮರಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಯಾವುದೇ ಪರವಾನಿಗೆ ಪಡೆಯದೇ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿಸದೇ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಮರಳನ್ನು ಕಳ್ಳತನ ಮಾಡಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಟದ ಲಾರಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.