BREAKING NEWS ಬೆಂಗಳೂರು: ಬೆಟ್ಟಿಂಗ್ ಚಟಕ್ಕೆ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪತಿ
Tuesday, June 16, 2026
ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ (32) ಕೊಲೆಯಾದವರು. ಪತಿ ಪ್ರದೀಪ್ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.
ನಗರದ ಪುಷ್ಪಾಂಜಲಿ ಥಿಯೇಟರ್ ಸಮೀಪದ ಮನೆಯಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಘಟನೆ ನಡೆದಿದೆ. ಆರೋಪಿ ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಹತ್ಯೆಗೂ ಮುನ್ನ ವಿಡಿಯೋ ದಾಖಲಿಸಿಕೊಂಡಿದ್ದ ಆತ, "ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ ಮತ್ತು ಮಕ್ಕಳು ಬೀದಿಗೆ ಬಂದಿದ್ದಾರೆ. ನಾನು ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ" ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಇದೇ ವೇಳೆ, ತನ್ನ ಪತ್ನಿ ಮಂಜುಳಾ ಅತ್ತೆ ಹಾಗೂ ನಾದಿನಿಯ ಪ್ರಭಾವದಿಂದ ಹಾಳಾಗಿದ್ದಾಳೆ ಎಂದು ಕೂಡ ವಿಡಿಯೋದಲ್ಲಿ ಆರೋಪಿಸಿದ್ದಾನೆ ಎಂದು ತಿಳಿದುಬಂದಿದೆ.
ವಿಡಿಯೋ ದಾಖಲಿಸಿದ ಬಳಿಕ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಹಾದೇವಪುರ ಪೊಲೀಸರು ಪರಾರಿಯಾಗಿರುವ ಆರೋಪಿ ಪ್ರದೀಪ್ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ.