Udupi: ಮೋದಿ ಜೊತೆ ಭೇಟಿಯಾದ ಉಡುಪಿಯ ಆರ್ ಎಸ್ ಎಸ್ ಸ್ವಯಂಸೇವಕ ದಿ. ಗುಜ್ಜಾಡಿ ನರಸಿಂಹ ನಾಯಕ್ ಕುಟುಂಬ
Tuesday, May 12, 2026
ಬೆಂಗಳೂರು: ಪ್ರಧಾನಿ ಮೋದಿ ಅವರು ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭ ಉಡುಪಿಯ ಆರೆಸ್ಸೆಸ್ ಕಾರ್ಯಕರ್ತನ ಕುಟುಂಬವೊಂದರ ಜೊತೆ ಕೆಲವು ಕ್ಷಣಗಳನ್ನು ಕಳೆದಿದ್ದಾರೆ.
"ಆಯಿಯೇ ಮೇರಾ ಸಂಘ ಪರಿವಾರ..." - ಇದು ಉಡುಪಿಯ ಹಿರಿಯ ಆರ್‌ಎಸ್‌ಎಸ್ ಸ್ವಯಂಸೇವಕ ದಿವಂಗತ ಗುಜ್ಜಾಡಿ ನರಸಿಂಹ ನಾಯಕ್ ಅವರ ಕುಟುಂಬವನ್ನು ಕಂಡಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿನಲ್ಲಿ ತೋರಿದ ಆತ್ಮೀಯ ಸ್ವಾಗತ. ರಾಜಕೀಯ ಸಭೆ-ಸಮಾರಂಭಗಳ ನಡುವೆ ಅತ್ಯಂತ ಭಾವನಾತ್ಮಕ ಮತ್ತು ಕೌಟುಂಬಿಕ ವಾತಾವರಣದಲ್ಲಿ ನಡೆದ ಈ ಭೇಟಿ, ತಳಮಟ್ಟದ ಕಾರ್ಯಕರ್ತರ ಬಗ್ಗೆ ಪ್ರಧಾನಿಯವರಿಗಿರುವ ಅಪಾರ ಗೌರವಕ್ಕೆ ಸಾಕ್ಷಿಯಾಯಿತು.
ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಂಸ್ಥಾಪಕ, ದಿವಂಗತ ಗುಜ್ಜಾಡಿ ನರಸಿಂಹ ನಾಯಕ್ ಅವರ ಶತಮಾನೋತ್ಸವದ ಅಂಗವಾಗಿ ಹೊರತರುತ್ತಿರುವ ಜೀವನಚರಿತ್ರೆ ಪುಸ್ತಕದ ಪುರಾವೆ ಪ್ರತಿಯನ್ನು ಅವರ ಆರು ಮಂದಿ ಸುಪುತ್ರರು ಪ್ರಧಾನಿಗೆ ಅರ್ಪಿಸಿದರು.
ಪ್ರಧಾನಿಯವರನ್ನು ಭೇಟಿಯಾಗುವಾಗ ಕುಟುಂಬದ ಸದಸ್ಯರಲ್ಲಿ ಸಹಜವಾಗಿಯೇ ಆತಂಕವಿತ್ತು. ಆದರೆ ಮೋದಿ ಅವರು ಮನೆಯ ಹಿರಿಯ ಸದಸ್ಯನಂತೆ ಪ್ರೀತಿಯಿಂದ ಮಾತನಾಡಿಸಿದಾಗ ಕುಟುಂಬದವರ ಕಣ್ಣಾಲಿಗಳು ತುಂಬಿ ಬಂದವು. "ಆಪ್ ಸಬ್ ಭಾವುಕ್ ಹೋ ಗಯೇ" (ನೀವೆಲ್ಲರೂ ಭಾವುಕರಾಗಿದ್ದೀರಿ) ಎಂದು ನಗುತ್ತಲೇ ಸಾಂತ್ವನ ಹೇಳಿದ ಪ್ರಧಾನಿ, ಇಡೀ ಭೇಟಿಯನ್ನು ಒಂದು 'ಪರಿವಾರ ಮಿಲನ'ವನ್ನಾಗಿ ಬದಲಿಸಿದರು.
ಪ್ರಭಾಕರ ನಾಯಕ್ ದಂಪತಿ ಮಲ್ಲಿಗೆ ಹಾರ, ಸರಳ ಶಾಲು ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಸಾದ ಅರ್ಪಿಸಿದರು.ಮೋದಿಯವರು ಸಂತೋಷದಿಂದ ಸ್ವೀಕರಿಸಿದರು. ರಾಮದಾಸ ನಾಯಕ್ ದಂಪತಿ ತಂದೆಯವರ ಕುರಿತ ಶತಮಾನೋತ್ಸವ ಪುಸ್ತಕದ ಪುರಾವೆ ಪ್ರತಿ ನೀಡಿದರು. ಪ್ರಧಾನಿ ಕುತೂಹಲದಿಂದ ಪರಿಶೀಲಿಸಿದರು.