Kundapura ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ: ಮೀನುಗಾರರು ಪ್ರಾಣಪಾಯದಿಂದ ಪಾರು..!
Thursday, February 26, 2026
ಕುಂದಾಪುರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಕುಂದಾಪುರ, ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ.
ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿರುವುದರಿಂದ ಸಂಭವನೀಯ ದುರಂತ ತಪ್ಪಿದೆ.
ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ “ಶ್ರೀ ದುರ್ಗಾಪರಮೇಶ್ವರಿ” ಹೆಸರಿನ ದೋಣಿ ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಫೆ.24ರಂದು ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಆಳ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ದೋಣಿಯ ಕೆಳಭಾಗಕ್ಕೆ ಅನಾಮಿಕ ವಸ್ತು ತಾಗಿದ ಪರಿಣಾಮ ಇಂಜಿನ್ ಭಾಗದ ಅಡಿಭಾಗದಲ್ಲಿ ನೀರು ನುಗ್ಗಲಾರಂಭಿಸಿ ಇಂಜಿನ್ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ದೋಣಿಯಲ್ಲಿದ್ದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಅವರು ನೀರನ್ನು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಸಮೀಪದಲ್ಲಿದ್ದ “ಶ್ರೀ ಕೃಷ್ಣ” ಬೋಟ್‌ನ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಐವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.