binduru: ಬೈಂದೂರು ಬಿಜೆಪಿ ಶಾಸಕರ ವಿರುದ್ಧ ‘ಭ್ರಷ್ಟಾಚಾರ, ವಸೂಲಿ’ – ಉಚ್ಚಾಟಿತ ನಾಯಕ ದೀಪಕ್ ಕುಮಾರ್ ಶೆಟ್ಟಿ ಗಂಭೀರ ಆರೋಪ” “ರೈತರ ಹೆಣದ ಮೇಲೆ ಉತ್ಸವ?” – ಶಾಸಕರ ವಿರುದ್ಧ ಬಿಜೆಪಿ ಹುಚ್ಚಾಟಿತ ನಾಯಕನ ಕಠಿಣ ವಾಗ್ದಾಳಿ”
Saturday, January 24, 2026
ಬೈಂದೂರು: ಬಿಜೆಪಿ ಪಕ್ಷದ ನಾಯಕತ್ವದ ವಿರುದ್ಧ ಅವಮಾನಕರವಾಗಿ ಮಾತನಾಡಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಈ ಸಂಬಂಧ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ನೋಟೀಸ್ ಜಾರಿಗೊಳಿಸಿದ್ದಾರೆ.
ಈ ಉಚ್ಚಾಟನೆ ಕುರಿತು ಶುಕ್ರವಾರ ಬೆಳಿಗ್ಗೆ ಬೈಂದೂರು ರೈತ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀಪಕ್ ಕುಮಾರ್ ಶೆಟ್ಟಿ, “ನಾನು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು, ನಂತರ ಸುಕುಮಾರ್ ಶೆಟ್ಟಿ ಹಾಗೂ ಸುಭಾಸ್ ಶೆಟ್ಟಿ ಅವರ ಒತ್ತಾಯದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡೆ. ಕಳೆದ 13 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಬರೀಗಾಲ ಸಂತ ಗುರುರಾಜ್ ಗಂಟಿಹೊಳೆ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಬಡವರ ಮನೆಯ ಹುಡುಗ ಎಂದು ಕಾರ್ಯಕರ್ತರು ಆರಿಸಿ ಕಳಿಸಿದ ವ್ಯಕ್ತಿ ಇಂದು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ “ಬರೀಗಾಲ ಸಂತ ದುಡ್ಡು ಪೂರ್ತಿ ನಂಗೆ ಬೇಕಂತ” ಇದರಿಂದ ಮುಂದೆ ಬೈಂದೂರಿಗೆ ಬರಗಾಲ ಬರಬಹುದು ಎಂದು ವ್ಯಂಗ್ಯವಾಡಿದರು.
ಬೈಂದೂರು ಕ್ಷೇತ್ರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಆರೋಪಿಸಿದ ಅವರು, “ಕ್ಷೇತ್ರದಲ್ಲಿ ಏಳು ಮರಳು ಧಕ್ಕೆಗಳಿದ್ದು, ಪ್ರತಿ ಧಕ್ಕೆಯಿಂದ ತಿಂಗಳಿಗೆ ಐದು ಲಕ್ಷ ರೂಪಾಯಿಯಂತೆ ಒಟ್ಟು 35 ಲಕ್ಷ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ರೈತರು ಗ್ರಾಮಾಂತರ ಪ್ರದೇಶವನ್ನು ಹೊರತುಪಡಿಸಿ ಪಟ್ಟಣ ಪಂಚಾಯತ್ ರಚನೆಗಾಗಿ ಹೋರಾಟ ನಡೆಸುತ್ತಿದ್ದರೂ, ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೈಂದೂರು ಉತ್ಸವದ ಮುಂಚೂಣಿಯಲ್ಲಿ ನಿಂತಿದ್ದಾರೆ. “ಇದು ರೈತರ ಹೆಣದ ಮೇಲೆ ಉತ್ಸವ ಮಾಡುವಂತಾಗಿದೆ. ಅಲ್ಲದೆ ಶಾಸಕರು ಉತ್ಸವದಲ್ಲಿ ಹಣ ಮಾಡಲು ತೊಡಗಿದ್ದಾರೆ. 10 ರೂಪಾಯಿ ಕಬ್ಬಿನ ಜ್ಯೂಸ್‌ಗೆ 25 ರೂಪಾಯಿ, 50 ರೂಪಾಯಿ ಗೋಬಿ ಮಂಚೂರಿಗೆ 100 ರೂಪಾಯಿ ಕೊಡಬೇಕಾಗಿದೆ” ಎಂದು ಕಿಡಿಕಾರಿದರು.
ಕಳೆದ ಬೈಂದೂರು ಉತ್ಸವದ ಸಂದರ್ಭ ದುಬೈಗೆ ತೆರಳಿ ಹಣ ಸಂಗ್ರಹ ಮಾಡಲಾಗಿದೆ ಎಂದು ಆರೋಪಿಸಿದ ಅವರು, “ಇಂತಹ ಭ್ರಷ್ಟ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನ್ನಂತಹ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟಿಸಲಾಗಿದೆ. ಇದು ನನ್ನ ರಾಜಕೀಯ ಕೊಲೆ” ಎಂದು ಬೇಸರ ವ್ಯಕ್ತಪಡಿಸಿದರು.
“ನನ್ನ ಉಚ್ಚಾಟನೆಗೆ ಮಂಡಲ ಅಧ್ಯಕ್ಷರಿಗೆ ಅಧಿಕಾರವಿಲ್ಲ. ಒಂದು ವಾರದೊಳಗೆ ನೀಡಿರುವ ನೋಟೀಸ್ ವಾಪಸು ಪಡೆಯಬೇಕು. ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರುವುದಿಲ್ಲ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬಿಜೆಪಿಯಲ್ಲೇ ಉಳಿದು ಕಾರ್ಯಕರ್ತರ ಜೊತೆ ದುಡಿಯುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಲಿಮೋನ್, ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಪಂಚಾಯತ್ ಸದಸ್ಯ ಭಾಸ್ಕರ್ ಮಾರಾಠಿ ಉಪಸ್ಥಿತರಿದ್ದರು.