kundapura :ತ್ರಾಸಿ ಜಿಲ್ಲಾ ಪಂಚಾಯತ್ ಚುನಾವಣೆತ್ರಾಸಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ತಮ್ಮಯ್ಯ ದೇವಾಡಿಗ ಹೆಸರು ಮುಂಚೂಣಿಯಲ್ಲಿ!
Thursday, October 15, 2026
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಿರಿಯ ರಾಜಕೀಯ ಮುಖಂಡ ತಮ್ಮಯ್ಯ ದೇವಾಡಿಗ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಆದರೆ, ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಕಳೆದ 25 ವರ್ಷಗಳಿಗೂ ಅಧಿಕ ರಾಜಕೀಯ ಅನುಭವ ಹೊಂದಿರುವ ತಮ್ಮಯ್ಯ ದೇವಾಡಿಗ ಅವರು ಗುಜ್ಜಾಡಿ ಗ್ರಾಮ ಪಂಚಾಯಿತಿನಲ್ಲಿ ಐದು ಬಾರಿ ಚುನಾಯಿತ ಪ್ರತಿನಿಧಿಯಾಗಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, ಮೂರು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರು, ಸ್ಥಳೀಯ ಆಡಳಿತದ ಅನುಭವ ಹೊಂದಿರುವ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಗ್ರಾಮೀಣ ಭಾಗದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಅವರ ರಾಜಕೀಯ ಬಲವೆಂದು ಬೆಂಬಲಿಗರು ಅಭಿಪ್ರಾಯಪಡುತ್ತಾರೆ. ರಾಜಕೀಯದ ಜೊತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿರುವ ತಮ್ಮಯ್ಯ ದೇವಾಡಿಗ ಅವರು ಪಂಚಗಂಗಾ ರೈತ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ. ತ್ರಾಸಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಚಿರಪರಿಚಿತರಾಗಿರುವ ಅವರು, ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ ಎಂಬುದು ಅವರ ಬೆಂಬಲಿಗರ ಅಭಿಪ್ರಾಯವಾಗಿದೆ. ತಮ್ಮ ದೀರ್ಘ ರಾಜಕೀಯ ಪಯಣದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಂದ ದೂರ ಉಳಿದ ನಾಯಕ ಎಂಬ ಹೆಗ್ಗಳಿಕೆಯನ್ನು ಅವರ ಬೆಂಬಲಿಗರು ಉಲ್ಲೇಖಿಸುತ್ತಾರೆ.
ಮಾಜಿ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ದಿವಂಗತ ರಾಜೀವ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದಿರುವ ತಮ್ಮಯ್ಯ ದೇವಾಡಿಗ ಅವರು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಹಾಗೂ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಬೈಂದೂರು ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ರಾಜು ದೇವಾಡಿಗ, ತ್ರಾಸಿ ಅವರ (ಬಾವ ) ಕುಟುಂಬದೊಂದಿಗೂ ಸಂಬಂಧ ಹೊಂದಿರುವ ಅವರು, ತ್ರಾಸಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮಯ್ಯ ದೇವಾಡಿಗ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯುತ್ತದೆಯೇ ಎಂಬ ಕುತೂಹಲ ಹೆಚ್ಚಿದ್ದು, ತ್ರಾಸಿ ಕ್ಷೇತ್ರದ ರಾಜಕೀಯ ಕಣ ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗೇರುವ ನಿರೀಕ್ಷೆಯಿದೆ.