kundapura ಕೋಟ: ಕಾಲೇಜು ವಿದ್ಯಾರ್ಥಿ ಹಿರೇಹೊಳೆಯಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆ
Saturday, June 13, 2026
ಕೋಟ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲುಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ದಾರುಣ ಘಟನೆ ಜೂನ್ 13ರ ಶನಿವಾರ ಸಂಜೆ ಸಂಭವಿಸಿದೆ.
ಗರಿಕೆಮಠ ನಿವಾಸಿಗಳಾದ ನಾಗರಾಜ್ ಹಾಗೂ ಶಿವಗಾಮಿ ದಂಪತಿಯ ಪುತ್ರ ಸಾಮರಾಜ್ (21) ನಾಪತ್ತೆಯಾದ ದುರ್ದೈವಿ ವಿದ್ಯಾರ್ಥಿ. ಈತ ಸ್ಥಳೀಯ ಇ.ಸಿ.ಆರ್. (ECR) ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಶನಿವಾರ ಸಂಜೆ ಸಾಮರಾಜ್ ತನ್ನ ಕಾಲೇಜಿನ ಎಂಟು ಮಂದಿ ಸ್ನೇಹಿತರೊಂದಿಗೆ ಸೇರಿ ಬೇಳೂರು ಕೋಣಬಗೆ ರೈಲ್ವೆ ಬ್ರಿಡ್ಜ್ ನ ಕೆಳಗಡೆ ಇರುವ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಸಾಮರಾಜ್ ಸೇರಿದಂತೆ ನಾಲ್ವರು ಸ್ನೇಹಿತರು ನದಿಗೆ ಇಳಿಯಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ನದಿಗೆ ಇಳಿಯುವಾಗ ಸಾಮರಾಜ್ ಕಾಲುಜಾರಿ ಆಳವಾದ ನೀರಿಗೆ ಬಿದ್ದಿದ್ದಾನೆ.
ಸಾಮರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಕ್ಷಣ ಉಳಿದ ಸ್ನೇಹಿತರು ಆತನನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಸಾಮರಾಜ್ ಕ್ಷಣಾರ್ಧದಲ್ಲಿ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.